Advertisement

ಹೇನ್‌ಬೇರು: ಕಾರಿನಲ್ಲಿ ವ್ಯಕ್ತಿಯ ಸುಟ್ಟು ಹಾಕಿದ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾ. ಬಂಧನ

11:33 PM Jul 18, 2022 | Team Udayavani |

ಕುಂದಾಪುರ: ಒತ್ತಿನೆಣೆ ಸಮೀಪದ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಕಾರಿನೊಳಗೆ ಕೂಡಿ ಹಾಕಿ, ಜೀವಂತವಾಗಿ ಸುಟ್ಟು ಹಾಕಿದ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಆ. 1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯವು ಜು. 18ರಂದು ಆದೇಶ ನೀಡಿದೆ.

Advertisement

ಕೊಲೆ ಕೃತ್ಯದ ಆರೋಪಿಗಳಾದ ಸದಾನಂದ ಶೇರೆಗಾರ್‌ (52), ಶಿಲ್ಪಾ ಪೂಜಾರಿ (30), ಕೃತ್ಯಕ್ಕೆ ಸಹಕರಿಸಿದ ಸತೀಶ್‌ ದೇವಾಡಿಗ (49) ಮತ್ತು ನಿತಿನ್‌ ದೇವಾಡಿಗ (35)ನನ್ನು ಸೋಮವಾರ ಕುಂದಾಪುರದ ನ್ಯಾಯಾಲಯಕ್ಕೆ ಬೈಂದೂರು ಪೊಲೀಸರು ಹಾಜರು ಪಡಿಸಿದರು.

ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಧನೇಶ್‌ ಮುಗಳಿ ಅವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಇದಕ್ಕೂ ಮೊದಲು ಆರೋಪಿಗಳು ಬೈಂದೂರು ಪೊಲೀಸರ ಕಸ್ಟಡಿಯಲ್ಲಿದ್ದರು. ಸ್ಥಳ ಮಹಜರು, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಅವರ ವಿಚಾರಣೆಯನ್ನು ನಡೆಸಿ ಸೋಮವಾರ ಕೋರ್ಟಿಗೆ ಹಾಜರುಪಡಿಸಿದರು. ಪ್ರಾಸಿಕ್ಯೂಶನ್‌ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದಿಸಿದ್ದರು.

ಸಜೀವ ದಹನ
ಆರೋಪಿಗಳು ನಿದ್ದೆ ಮಾತ್ರೆ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆನಂದ ದೇವಾಡಿಗ ಅವರನ್ನು ಹೇನ್‌ಬೇರಿನ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಇಟ್ಟು ಪೆಟ್ರೋಲ್‌ ಸುರಿದು ಕಾರು ಸಮೇತ ಸಜೀವ ದಹನಗೈದಿದ್ದರು.

Advertisement

ಸದಾನಂದ ತಾನೇ ಆತ್ಮಹತ್ಯೆಗೈದು ಸತ್ತು ಹೋಗಿದ್ದೇನೆಂದು ಸಮಾಜಕ್ಕೆ ತಿಳಿಸಲು ಮಲಯಾಳಿ ಚಿತ್ರ “ಕುರುಪ್‌’ ಅನ್ನು ಅನುಸರಿಸಿಕೊಂಡು ತನ್ನಂತೆಯೇ ಹೋಲುತ್ತಿದ್ದ ಆನಂದ ಅವರನ್ನು ಸುಟ್ಟು ಹಾಕಿದ್ದ. ಆದರೆ ಆತನ ಯೋಜನೆ ಫ‌ಲಿಸಲಿಲ್ಲ. ಪೊಲೀಸರ ಕೈಗೆ ಸಿಕ್ಕಿಬಿದ್ದು, ಆರೋಪಿಯಾಗಿ ಇತರ ಮೂವರೊಂದಿಗೆ ಜೈಲು ಪಾಲಾಗಿದ್ದಾನೆ.

ಶಿಲ್ಪಾ ಶಿವಮೊಗ್ಗ ಜೈಲಿಗೆ
ಕೊಲೆ ಪ್ರಕರಣದ ಆರೋಪಿಗಳ ಪೈಕಿ ಸದಾನಂದ, ಸತೀಶ್‌ ಹಾಗೂ ನಿತಿನ್‌ನನ್ನು ಉಡುಪಿಯ ಹಿರಿಯಡಕ ಸಬ್‌ಜೈಲಿಗೆ ಕರೆದೊಯ್ಯಲಾಯಿತು. ಮತ್ತೋರ್ವ ಆರೋಪಿ ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಯಿತು. ಉಡುಪಿ ಸಬ್‌ಜೈಲ್‌ ಆಗಿದ್ದು, ಇಲ್ಲಿ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇರಿಸಿಕೊಳ್ಳಬಹುದು. ಒಂದು ವೇಳೆ ಆರೋಪಿಗಳಿಗೆ ಶಿಕ್ಷೆಯಾದರೆ ಸೆಂಟ್ರಲ್‌ ಜೈಲಿಗೆ ಕಳುಹಿಸಲಾಗುತ್ತದೆ. ಸೆಂಟ್ರಲ್‌ ಜೈಲಿನಲ್ಲಿ ಎಲ್ಲ ರೀತಿಯ ಕೈದಿಗಳನ್ನೂ ಇಟ್ಟುಕೊಳ್ಳಬಹುದು.

ಹಾಗೆಯೇ ಹಿರಿಯಡಕ ಸಬ್‌ಜೈಲಿನಲ್ಲಿ ಮಹಿಳಾ ಬ್ಯಾರಕ್‌ ಕೂಡ ಇಲ್ಲ. ಹಾಗಾಗಿ ನ್ಯಾಯಾಲಯದ ಅನುಮತಿ ಪಡೆದು ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಯಿತು.

ಉಡುಪಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರಾಜೇಶ್ವರಿ ಶೆಟ್ಟಿ ಅವರನ್ನು ಕೂಡ ಅಂದು ಹಿರಿಯಡಕ ಸಬ್‌ಜೈಲಿನಲ್ಲಿ ಇರಿಸಲಾಗಿರಲಿಲ್ಲ. ಬದಲಾಗಿ ಮಂಗಳೂರು ಜೈಲಿನಲ್ಲಿರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next