Advertisement

ಮಳೆಗಾಲದಲ್ಲಿ ಹೆಗ್ಡೆ ಬೆಟ್ಟು  ಗ್ರಾಮಸ್ಥರ ವ್ಯ(ಕ)ಥೆ !

08:25 AM Aug 06, 2017 | Harsha Rao |

ಕಾರ್ಕಳ: ಹೇಳಿ ಕೇಳಿ ಇದು ಕುಗ್ರಾಮ. ಊರ ಸುತ್ತಲೂ ಆವರಿಸಿದ ಕಾಡು-ಬೆಟ್ಟ., ಅದರ ನಡುವೆ ಆಧುನಿಕ ಸವಲತ್ತುಗಳ ಸಣ್ಣ ಪ್ರವೇಶ, ಹರಿಯುವ ನದಿಗೆ ಕಟ್ಟಿರುವ ಕಾಲುಸೇತುವೆಯಲ್ಲಿಯೇ ತೂಗುತ್ತಿರುವ ಬದುಕು ಇಲ್ಲಿ ಅತಂತ್ರ.

Advertisement

ಪಶ್ಚಿಮ ಘಟ್ಟದ ಬುಡದಲ್ಲಿ ಹಾದು ಹೋಗುವ ಪುಟ್ಟ ಊರಾದ ಹೆಗ್ಡೆಬೆಟ್ಟುವಿನ ಸಣ್ಣ ಚಿತ್ರವಿದು. ಇಲ್ಲಿ ಮಳೆ ಬಂದರೆ ಸಾಕು ತುಂಬಿದ ನದಿಯ ಮೇಲೆ ಕಟ್ಟಿದ ಮರದ ಸೇತುವೆಯನ್ನೇ ಆಶ್ರಯಿಸಿ ಶಿರ್ಲಾಲು ಮುಖ್ಯ ರಸ್ತೆಗೆ  ಹೋಗಬೇಕಾದ ಪರಿಸ್ಥಿತಿ. ಪಕ್ಕದ ಊರುಗಳಾದ ಮೂಡಾಯ್‌ಬೆಟ್ಟು, ಸರಳೆಬೆಟ್ಟು, ಗಂಗೆಬೆಟ್ಟು ಇಲ್ಲಿನ ಜನರಿಗೂ ಮಳೆಗಾಲ ಬಂತೆಂದರೆ ಸಾಕು ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾದ ಅನಿವಾರ್ಯ ಕರ್ಮ. ಒಮ್ಮೆ ಆ ಬಿದಿರಿನ ಸೇತುವೆಯನ್ನು ದಾಟಿದರೆ ಮತ್ತೆ ಜೀವ ಬಂದಂತೆ. ಆದರೂ ಪ್ರತೀ ಮಳೆಗಾಲವನ್ನು ಇಲ್ಲಿನ ಗ್ರಾಮಸ್ಥರು ಹೀಗೆ ಜೀವ  ಕೈಯ್ಯಲ್ಲಿ ಹಿಡಿದುಕೊಂಡೇ ಕಳೆಯುತ್ತಿದ್ದಾರೆ. ಹಳೆ ಸೇತುವೆಗೊಂದು ಮುಕ್ತಿ ಸಿಕ್ಕಿಲ್ಲ ಎಂದು ಗೊಣಗುತ್ತಿದ್ದಾರೆ.

35 ವರ್ಷದ ಗೋಳು
ಇಲ್ಲಿನ ಜನ ಕಳೆದ 35 ವರ್ಷಗಳಿಂದ  ಇದೇ ಮರದ ಸೇತುವೆಯನ್ನು ಆಶ್ರಯಿಸಿದ್ದಾರೆ. ಊರಿಗೆ ಬೇರೆಲ್ಲಾ ಆಧುನಿಕ ಸೌಕರ್ಯ ಒದಗಿ ಬಂದರೂ ಊರ ಜನ ಮಾತ್ರ ಹಳೆಯ ಕಾಲದ ಸೇತುವೆಯನ್ನೇ ಅವಲಂಬಿಸಿದ್ದಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ದಿನದೂಡುತ್ತಿದ್ದಾರೆ.

ಮಳೆಗಾಲದ ವ್ಯ(ಕ)ಥೆ
ಹೆಗ್ಡೆಬೆಟ್ಟು ಬಳಸಿ ಅಜ್ಜಿಕುಂಜೆಯಲ್ಲಿರುವ ಸುವರ್ಣ ನದಿಗೆ ಸೇರುವ ಈ ಸುವರ್ಣ ನದಿಯ ಉಪನದಿಗೆ ಕಳೆದ 35 ವರ್ಷಗಳಿಂದ ಇರುವ ಬಿದಿರಿನ ಸೇತುವೆಯೇ ಶಿರ್ಲಾಲಿಗೆ ಸಂಪರ್ಕ ಕಲ್ಪಿಸುತ್ತಿದೆ. ಸುಮಾರು 45ಕ್ಕೂ ಹೆಚ್ಚಿನ ಮನೆಗಳು ಈ ಪರಿಸರದಲ್ಲಿ ಇದ್ದು, ಮಳೆಗಾಲಕ್ಕೆ ಈ ಕಾಲುಸೇತುವೆಯನ್ನೇ ನಂಬಿಕೊಂಡು ದಾರಿ ಕ್ರಮಿಸುವುದು ಅನಿವಾರ್ಯ ವಾಗುತ್ತಿದೆ. ಬಿದಿರಿನಿಂದ ತಯಾರಿಸಿದ ಈ ತೂಗು ಸೇತುವೆ ಇನ್ನೇನು ಜೀರ್ಣಾವಸ್ಥೆಯ ಅಂಚಿಗೆ ತಲುಪಲಿದ್ದು ಚೂರು ಎಚ್ಚರ ತಪ್ಪಿದರೂ ಸಾಕು ಸೇತುವೆ ಪೂರ್ತಿ ಅಲುಗಾಡಲು ಶುರುವಾಗುತ್ತದೆ. ಆದರೂ ದಿನೇ ದಿನೇ ಇಲ್ಲಿಂದಲೇ ಸುಮಾರು 4-5 ಕಿ.ಮೀ. ದೂರದ ಶಾಲೆಗೆ ತೆರಳುವ ಮಕ್ಕಳೂ ಪೇಟೆಯತ್ತ ಹೊರಡುವ ಜನಗಳು ನಮ್ಮ ಕಷ್ಟ ನಮಗೆ ಎಂದು ತ್ರಾಸ ಪಟ್ಟು ಈ ಸೇತುವೆ ಬಳಸಿ ಹೋಗುತ್ತಿದ್ದಾರೆ.

ಬೇಸಗೆಯಲ್ಲಿ ಪರ್ಯಾಯ ದಾರಿ
ಮಳೆಗಾಲ ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಗ್ರಾಮಸ್ಥರು, ಇದೀಗ ನೀರು ಹರಿದು ಹೋಗುವ ಜಾಗದಲ್ಲಿಯೇ ಪರ್ಯಾಯ ದಾರಿ ಕಂಡುಕೊಂಡಿದ್ದಾರೆ.ಅದೂ ಹುಲ್ಲುಹಾಸಿನ ದಾರಿಯೇನಲ್ಲ,ಕಲ್ಲು ಮುಳ್ಳಿನ ಕೊಂಪೆಯಂತಹ ದಾರಿ. ಆದರೆ ಮಳೆಗಾಲದಲ್ಲಿ ಆ ಪ್ರದೇಶವೆಲ್ಲಾ ಮುಳುಗಡೆಯಾಗುವುದರಿಂದ ಈ ತೂಗು ಸೇತುವೆಯೇ ಮಳೆಗಾಲದ ಬದುಕಿಗೆ ನಿತ್ಯಾಧಾರವಾಗಿದೆ.

Advertisement

ಜನಪ್ರತಿನಿಧಿಗಳಿಗೆ ಕ್ಯಾರೇ ಇಲ್ಲ
ಗ್ರಾಮಸ್ಥರು ತೂಗುಸೇತುವೆಯ ಮೇಲೆ ನಿತ್ಯ ತೂಗುಯ್ನಾಲೆಯಂತಹ ತ್ರಾಸದಾಯಕ ಪಯಣ ನಡೆಸುತ್ತಿದ್ದರೂ ಜನಪ್ರತಿ ನಿಧಿ ಗಳ ಕಣ್ಣು ಮಾತ್ರ ಇತ್ತ ಬೀಳುತ್ತಿಲ್ಲ. ಬರೀ ಭರವಸೆಗಷ್ಟೇ ಇಲ್ಲಿನ ಅಭಿವೃದ್ಧಿ ಸೀಮಿತ ವಾಗುತ್ತಿದೆ ಬಿಟ್ಟರೆ ಇಲ್ಲಿನ ಮಳೆಗಾಲದ ವ್ಯಥೆ ಸಂಬಂಧಪಟ್ಟವರಿಗೆ ಕೇಳುತ್ತಿಲ್ಲ.

ನಕ್ಸಲ್‌ಪೀಡಿತ ಗ್ರಾಮ
ಕಳೆದ ಎರಡು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಕ್ಸಲರು ಕರಪತ್ರ ಹಂಚಿ ಸುದ್ದಿಯಾಗಿದ್ದಾರೆ. ನಕ್ಸಲರ ಜತೆಗೆ ಈ ಗ್ರಾಮವೂ ಸುದ್ದಿಯಾಗಿತ್ತು. ತೂಗು ಸೇತುವೆಗೆ ಮುಕ್ತಿ ಕೊಟ್ಟು ಊರಿನವರಿಗೆ ಹೊಸ ದಾರಿ ನಿರ್ಮಿಸಿಕೊಡುವಂತೆ ಕರಪತ್ರದಲ್ಲಿ ತಿಳಿಸಲಾಗಿತ್ತು.

– ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next