ಬ್ರಿಸ್ಬೇನ್: ಬ್ರಿಸ್ಬೇನ್ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಮೋಘ ಆರಂಭ ಪಡೆದಿದೆ. ಮೊದಲ ದಿನವೇ ಒಂದು ಚಿನ್ನ, ಒಂದು ಕಂಚಿನ ಪದಕಕ್ಕೆ ಗುರಿ ಇರಿಸಿದೆ.
ವನಿತಾ ಶೂಟಿಂಗ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ಬಂಗಾರದ ಪದಕ ಗೆದ್ದರೆ, ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಹೀನಾ ಸಿಧು ಒಟ್ಟು 626.2 ಅಂಕ (386+240.8) ಸಂಪಾದಿಸಿ ಬಂಗಾರದಿಂದ ಸಿಂಗಾರಗೊಂಡರು. ಇದು ಹೀನಾಗೆ ಸತತ 2 ಅಂತಾರಾಷ್ಟ್ರೀಯ ಕೂಟಗಳಲ್ಲಿ ಒಲಿದ 2ನೇ ಸ್ವರ್ಣ ಪದಕ. ಕೆಲವು ದಿನಗಳ ಹಿಂದಷ್ಟೇ ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಫೈನಲ್ಸ್‌ನಲ್ಲಿ ಅವರು ಜಿತು ರಾಯ್ ಜತೆಗೂಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು.
ಮಂಗಳವಾರ 386 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಆತಿಥೇಯ ಆಸ್ಟ್ರೇಲಿಯದ ಸ್ಪರ್ಧಿಗಳಾದ ಎಲೆನಾ ಗಲಿಯಬೊವಿಚ್ ಬೆಳ್ಳಿ (238.2) ಮತ್ತು ಕಿಸ್ಟಿì ಗಿಲ್ಮನ್ ಕಂಚು (213.7) ಗೆದ್ದರು. ಭಾರತದ ಹರ್ವೀನ್ ಸ್ರಾವೊ 4ನೇ (194 ಅಂಕ), ಸ್ರಿà ನಿವೇತಾ ಪರಮಾನಂತಂ 5ನೇ ಸ್ಥಾನಿಯಾದರು (174.5).
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 224.2 ಅಂಕ ಪಡೆದ ದೀಪಕ್ ಕುಮಾರ್ ತೃತೀಯ ಸ್ಥಾನ ಪಡೆದರು. ಆಸ್ಟ್ರೇಲಿಯದ ಅಲೆಕ್ಸ್ ಹೋಬರ್ಗ್ ಚಿನ್ನ (247.6) ಮತ್ತು ಇದೇ ನಾಡಿದ ಜಾಕ್ ರಿಸಿಟರ್ ಕಂಚಿನ ಪದಕ ಗೆದ್ದರು (245.5). ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ 4ನೇ, ರವಿಕುಮಾರ್ 5ನೇ ಸ್ಥಾನಕ್ಕೆ ಇಳಿದರು.