Advertisement

ನನ್ನ ಪತಿಯನ್ನು ಕೊಂದವರನ್ನು ಸಾಯಿಸಿ; ಪೊಲೀಸರು ಮಾಡಿದ್ದು ಸರಿ- ಏನಂತಾರೆ ಆರೋಪಿಗಳ ಮನೆಯವರು?

10:03 AM Dec 07, 2019 | Hari Prasad |

ಹೈದರಾಬಾದ್: ಪಶುವೈದ್ಯೆಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಬಳಿಕ ಬರ್ಭರವಾಗಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಇಂದು ಮುಂಜಾನೆ ಎನ್ ಕೌಂಟರ್ ನಲ್ಲಿ ಸಾಯಿಸಿರುವ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಪೊಲೀಸರ ಈ ಕ್ರಮಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಈ ಎನ್ ಕೌಂಟರ್ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಮನೆಯವರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Advertisement

ಎನ್ ಕೌಂಟರ್ ಪ್ರಕರಣದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಅತ್ಯಾಚಾರ ಆರೋಪಿಗಳಾದ ಮಹಮ್ಮದ್ ಆರೀಫ್, ಚಿಂತಕುಲ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ ಮನೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.


ಎನ್ ಕೌಂಟರ್ ಸುದ್ದಿ ತಿಳಿದು ಕುಸಿದುಬಿದ್ದ ಮಹಮ್ಮದ್ ಆರೀಫ್ ಕುಟುಂಬ

ಈ ಅತ್ಯಾಚಾರ ಪ್ರಕರಣದ ಮೊದಲನೇ ಆರೋಪಿ ಮಹಮ್ಮದ್ ಆರೀಫ್. ಇಂದು ಬೆಳಿಗ್ಗೆ ನಡೆದ ಪೊಲೀಸ್ ಎನ್ ಕೌಂಟರ್ ಸುದ್ದಿ ಆರೀಫ್ ಕುಟುಂಬಕ್ಕೆ ಪೊಲೀಸರು ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ಆತನ ತಂದೆ ಮತ್ತು ಮನೆಯವರು ಕುಸಿದುಬಿದ್ದಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರೀಫ್ ತಂದೆ ಗದ್ಗದಿತರಾದರು. ಇನ್ನು ಆರೀಫ್ ಸ್ನೇಹಿತ ಈ ಘಟನೆಯನ್ನು ಖಂಡಿಸಿದ್ದಾನೆ. ಈ ನಾಲ್ವರನ್ನು ಪೊಲೀಸರು ಯೋಜನೆ ಮಾಡಿ ಸಾಯಿಸಿದ್ದಾರೆ ಎಂದಾತ ಆರೋಪಿಸಿದ್ದಾನೆ.

ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಸುಟ್ಟು ಸಾಯಿಸಿದ ಬಳಿಕ ಮನೆಗೆ ಬಂದಿದ್ದ ಮಹಮ್ಮದ್ ಆರೀಫ್ ತನ್ನ ತಾಯಿಯ ಬಳಿ ತಾನು ಚಲಾಯಿಸುತ್ತಿದ್ದ ಲಾರಿ ಒಂದು ಮಹಿಳೆಯಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಆಕೆ ಮೃತಪಟ್ಟಲು ಎಂದು ಭಯದಿಂದ ಹೇಳಿಕೊಂಡಿದ್ದ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

Advertisement

ನನ್ನ ಪತಿಯನ್ನು ಕೊಂದವರನ್ನು ಸಾಯಿಸಿ ಎಂದ ನವವಿವಾಹಿತೆ!
ಇನ್ನು ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ಚಿಂತಕುಲ ಚೆನ್ನಕೇಶವುಲು ಪತ್ನಿ ತನ್ನ ಪತಿ ಪೊಲೀಸ್ ಎನ್ ಕೌಂಟರ್ ನಲ್ಲಿ ಮಡಿದ ಸುದ್ದಿ ಕೇಳಿ ಕೆಂಡಾಮಂಡಲವಾಗಿದ್ದಾಳೆ.

ವಿಚಾರಣೆ ನಡೆಸಿ ಬಿಟ್ಟು ಕಳಿಸುತ್ತೇವೆ ಎಂದು ನನ್ನ ಪತಿಯನ್ನು ಕರೆದೊಯ್ದು ಇದೀಗ ಆತನನ್ನು ಕೊಂದ ಪೊಲೀಸರನ್ನು ತಾನು ಕ್ಷಮಿಸುವುದಿಲ್ಲ, ನಮ್ಮ ವಿವಾಹವಾಗಿ ಆರು ತಿಂಗಳುಗಳಷ್ಟೇ ಕಳೆದಿದೆ ಎಂದು ರೋಧಿಸಿದ್ದಾಳೆ. ‘ನನ್ನ ಪತಿಯನ್ನು ಕೊಂದವರನ್ನು ಸಾಯಿಸಿಬಿಡಿ, ಅವರಿಲ್ಲದೆ ನಾನೂ ಬದುಕುವುದಿಲ್ಲ’ ಎಂದು ಆಕೆ ಆಕ್ರೋಶದಿಂದ ನುಡಿದಿದ್ದಾಳೆ.

ಪೊಲೀಸರು ಸರಿಯಾದುದನ್ನೇ ಮಾಡಿದ್ದಾರೆ
ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಜೊಲ್ಲು ಶಿವ ಮತ್ತು ಜೊಲ್ಲು ನವೀನ ಕುಟುಂಬದವರು ಪೊಲೀಸರು ಈ ಕ್ರಮ ಸರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಇವರ ತಂದೆಗೆ ಮತ್ತು ಮನೆಯವರಿಗೆ ಮಾಧ್ಯಮದವರು ಸಂಪರ್ಕ ಮಾಡುವವರೆಗೆ ತಮ್ಮ ಮಗ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿರುವ ವಿಚಾರವೇ ತಿಳಿದಿರಲಿಲ್ಲ.

ಅಮಾಯಕಿಯನ್ನು ಅಮಾನುಷವಾಗಿ ಕೊಂದವರನ್ನು ಪೊಲೀಸರು ಸಾಯಿಸಿ ಸರಿಯಾದುದನ್ನೇ ಮಾಡಿದ್ದಾರೆ. ಆದರೆ ಇಂತಹುದೇ ಇನ್ನಿತರ ಪ್ರಕರಣಗಳ ಆರೋಪಿಗಳಿಗೆ ಯಾಕೆ ಈ ರೀತಿಯ ಶಿಕ್ಷೆಯಾಗಿಲ್ಲ ಎಂದು ಶಿವ ಮತ್ತು ನವೀನರ ಮಾವ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಪಶುವೈದ್ಯೆಯನ್ನು ಅಮಾನುಷವಾಗಿ ಬಲಿ ಪಡೆದ ಕಾಮುಕರನ್ನು ಎನ್ ಕೌಂಟರ್ ಮಾಡಿದ ಕ್ರಮವನ್ನು ಹಲವರು ಸಮರ್ಥಿಸುತ್ತಿದ್ದಾರೆ. ಆದರೆ ಆರೋಪಿಗಳ ಕುಟುಂಬ ಸದಸ್ಯರಿಗೆ ಈ ಘಟನೆಯ ಸುದ್ದಿ ಆಘಾತವನ್ನುಂಟುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next