ಹೆಬ್ರಿ: ಹೆಬ್ರಿ ಗ್ರಾ.ಪಂ.ನ 2017-18ನೇ ಸಾಲಿನ ಪ್ರಥಮ ಗ್ರಾಮಸಭೆ ಹೆಬ್ರಿ ಸಮಾಜ ಮಂದಿರದಲ್ಲಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು.
ಹೆಬ್ರಿ ಬಸ್ ನಿಲ್ದಾಣದ ಸಮೀಪವಿದ್ದ ಸಮುದಾಯ ಆರೋಗ್ಯ ಕೇಂದ್ರ ಸ್ಥಳಾಂತರಗೊಂಡಿದ್ದು ಆ ಸ್ಥಳದಲ್ಲಿ ಬಸ್ ನಿಲ್ದಾಣ ವಿಸ್ತರಿಸುವಂತೆ, ಹೆಬ್ರಿಯ ಪ್ರಮುಖ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೆಲವೆಡೆ ಮೋರಿ ಮುಚ್ಚಿ ಮಾರ್ಗ
ದಲ್ಲೇ ಮಳೆನೀರು ಹರಿದು ಹೋಗುತ್ತಿದ್ದು ರಸ್ತೆಗಳು ಹಾಳಾಗುತ್ತಿವೆ, ವಿದ್ಯುತ್ ಸಮಸ್ಯೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಮೊದಲಾದ ವಿಷಯಗಳ ಬಗ್ಗೆ ಅಧಿಕಾರಿಗಳು ಹಾಗೂ ಪಂಚಾಯತ್ ಗಮನಕ್ಕೆ ತಂದ ಗ್ರಾಮಸ್ಥರು ಚರ್ಚೆ ನಡೆಸಿದರು.
ಹೆಬ್ರಿಯಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ದಿನಂಪ್ರತಿ ದೂರುಗಳು ಬರುತ್ತಿವೆ. ಶಾಲೆ ಬಿಡುವ ಹಾಗೂ ಜನದಟ್ಟಣಿಯ ಸಂದರ್ಭ ಟ್ರಾಫಿಕ್ ವ್ಯವಸ್ಥೆ ಸರಿಯಾಗಿ ನಿರ್ವಹಿಸುವಂತೆ ಈಗಾಗಲೇ ಹಲವಾರು ಬಾರಿ ಪತ್ರ ಮುಖೇನ ಠಾಣೆಗೆ ತಿಳಿಸಿದರೂ ಸರಿಯಾದ ವ್ಯವಸ್ಥೆ ಆಗಿಲ್ಲ. ಹೆಬ್ರಿ ಠಾಣೆಯ ಸಿಸಿ ಕೆಮೆರಾ ಕೆಟ್ಟು ಹೋಗಿದ್ದು ದನಕಳ್ಳರು ಅಥವಾ ಅಪಘಾತ ನಡೆದ ಬಗ್ಗೆ ವಾಹನ ಪತ್ತೆಗೆ ಕಷ್ಟವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಲಿ. ಉಳಿದ ಸಮಸ್ಯೆಗಳ ಬಗ್ಗೆ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಪಂಚಾಯತ್ ಅಧ್ಯಕ್ಷರು ಮಾತನಾಡಿದರು.
ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಉಪಾಧ್ಯಕ್ಷೆ ವೀಣಾ ವಿ. ಪ್ರಭು, ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ ಕೆ. ರಾಧಾಕೃಷ್ಣ ಶೆಟ್ಟಿ ಮೊದಲಾದವರಿದ್ದರು.
ಪಿಡಿಒ ವಿಜಯ ಸ್ವಾಗತಿಸಿದರು. ಪ್ರಭಾರ ಕಾರ್ಯದರ್ಶಿ ಪಾಪಣ್ಣ ಎಸ್. ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬಂದಿ ಪ್ರಸಾದ್ ವಂದಿಸಿದರು.