Advertisement

ಮತ್ತೆ ಕೈ ತಪ್ಪಿದ ಹೆಬ್ರಿ ತಾಲೂಕು ರಚನೆ: ಗ್ರಾಮಸ್ಥರ ಆಕ್ರೋಶ

02:18 PM Mar 16, 2017 | Team Udayavani |

ಹೆಬ್ರಿ: ಹೆಬ್ರಿ ತಾಲೂಕು ಆಗಬೇಕೆಂದು  ಸುಮಾರು 57 ವರ್ಷದ ಬೇಡಿಕೆಯಾಗಿದ್ದು ಹೆಬ್ರಿ ತಾಲೂಕು ಆಗಲು ಎಲ್ಲ ಅರ್ಹತೆಯನ್ನು ಹೊಂದಿದ್ದು ತಾಲೂಕು ಪುನರ್‌ ರಚನಾ ರಾಜ್ಯ ಸಮಿತಿಯ 2012ರಲ್ಲಿ ಅಧ್ಯಕ್ಷರಾಗಿದ್ದ ಎಂ.ಬಿ. ಪ್ರಕಾಶ್‌ ಉಡುಪಿ ಜಿಲ್ಲೆಯಲ್ಲಿ  ಹೆಬ್ರಿ ತಾಲೂಕು ರಚನೆಗೆ  ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂಬ ಆಧಾರದಲ್ಲಿ ಹೆಬ್ರಿ ತಾಲೂಕು ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ  ಹೆಬ್ರಿ ಜನತೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಬ್ರಿ ತಾಲೂಕು ಘೋಷಣೆಯಾಗದೆ ನಿರಾಸೆ ಮೂಡಿಸಿದೆ.

Advertisement

57 ವರ್ಷಗಳಿಂದ ಹೋರಾಟ 
ಕಳೆದ 57 ವರ್ಷಗಳಿಂದ ತಾಲೂಕು ಆಗಲು ಅರ್ಹವಿರುವ ಹೆಬ್ರಿಯ ಬಗ್ಗೆ ಹೋರಾಟ ನಡೆಸುತ್ತಿದ್ದರೂ ಕೇವಲ 6ತಿಂಗಳಿಂದ ಹೋರಾಟ ಮಾಡಿದ ಕಾಪುವಿಗೆ ತಾಲೂಕು ಘೋಷಣೆ ಮಾಡಿ ಹೆಬ್ರಿಗೆ ಅನ್ಯಾಯ ಮಾಡಿ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ತೋರಿಸಿರುವುದು ಬೇಸರ ತಂದಿದೆ ಎಂದು ಹೆಬ್ರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್‌ ಜೋಯಿಸ್‌ ತಿಳಿಸಿದ್ದಾರೆ.

ಸಂಘಟನೆ ದೌರ್ಬಲ್ಯ
ಹೆಬ್ರಿ ತಾಲೂಕು ಹೋರಾಟಕ್ಕೆ ಇತಿಹಾಸವಿದೆ ಆದರೆ ವ್ಯವಸ್ಥಿತ ರೀತಿಯಲ್ಲಿ ಪ್ರತಿಭಟನೆ ಹಾಗೂ ಸಂಘಟನೆಯ ಕೊರತೆಯಿಂದ ಇಂದು ಹೆಬ್ರಿ ತಾಲೂಕು ಘೋಷಣೆಯಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಹೋರಾಟದಿಂದ ಇಂದು ಆರ್ಹತೆಯಿರುವ ಹೆಬ್ರಿ ತಾಲೂಕು ರಚನೆ  ಕೈ ತಪ್ಪಿದೆ ಎಂದು ಪ್ರಗತಿಪರ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ತಿಳಿಸಿದ್ದಾರೆ.

ಅರ್ಹತೆ ಇದೆ ಯಾಕೆ ಆಗಿಲ್ಲ? 
ಹೆಬ್ರಿ ಮಲೆನಾಡು ಪ್ರದೇಶದಲ್ಲಿದ್ದು ಪರಿಶಿಷ್ಟ ಜಾತಿ ಮತ್ತು ವರ್ಗದವರ ಅತೀ ಹೆಚ್ಚಿನ ವಾಸ್ತವ್ಯ ಪ್ರದೇಶವಾಗಿದ್ದು  ವಿಸ್ತೀರ್ಣದಲ್ಲಿ 896  ಚ. ಕಿ.ಮೀ. 1 ಲಕ್ಷ 15 ಸಾವಿರ 2001ರ ಜನಗಣತಿ ಪ್ರಕಾರ ಜನಸಂಖ್ಯೆಯಿದ್ದು  ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಏಕೆ? ಇದರಲ್ಲಿ ರಾಜಕೀಯ ಕೈವಾಡ ಇದೆಯ ಎಂಬುದು ಗ್ರಾಮಸ್ಥರ ಪ್ರಶ್ನೆ.

ಜನ ನಾಯಕರು  ಪ್ರಯತ್ನ ಮಾಡಿಲ್ಲ
ಕರ್ನಾಟಕ ರಾಜ್ಯ ರ್ಸಕಾರ ಹೆಬ್ರಿಯನ್ನು ತಾಲೂಕು ಆಗಿ ಘೋಷಣೆ ಮಾಡುವಲ್ಲಿ ತಾರತಮ್ಯ ಮಾಡಿದೆ ಹಾಗೂ ನಮ್ಮ ಜನ ನಾಯಕರು ಯಾರೂ ಈ ಬಗ್ಗೆ ಪ್ರಯತ್ನವನ್ನೇ ಮಾಡಿಲ್ಲ.ಹಾಗಾಗಿ ಮನನೊಂದು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುರಿವುದಾಗಿ ಹೋರಾಟದ ಪ್ರಮುಖರಲ್ಲಿ ಓರ್ವರಾದ ನವೀನ್‌ ಅಡ್ಯಂತಾಯ ಹೇಳಿದ್ದಾರೆ.

Advertisement

ಪಕ್ಷಕ್ಕೆ ರಾಜೀನಾಮೆ 
ಹೆಬ್ರಿ ತಾಲೂಕು ರಚನೆಯಾಗದ ಬಗ್ಗೆ ಮನನೊಂದು ಕುಚ್ಚಾರು ಬೇಳಂಜೆ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಕಿರಣ್‌ ತೋಳಾರ್‌, ಬೇಳಂಜೆ ಕಾಂಗ್ರೆಸ್‌ ಅಧ್ಯಕ್ಷ ರೋಶನ್‌ ಶೆಟ್ಟಿ, ಕುಚ್ಚಾರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಶೆಟ್ಟಿ ದೇಗುಲ ಬೈಲು ಅವರು ಕಾಂಗ್ರೆಸ್‌ ಪಕ್ಷದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅನುಮೋದನೆ ಮೊದಲು ಹೆಬ್ರಿ ತಾಲೂಕು ಮಾಡಿ: ಗೋಪಾಲ ಭಂಡಾರಿ
ಕಳೆದ 57 ವರ್ಷಗಳಿಂದ ಹೋರಾಟ ಮಾಡು ತ್ತಿರುವ ಹೆಬ್ರಿ ತಾ| ಘೋಷಣೆಯಾಗ ದಿರುವುದು ಈ ಭಾಗದ ಜನತೆಗೆ ತುಂಬ ಬೇಸರ ತಂದಿದೆ. ನಾನು ವಿಪಕ್ಷದ ನಾಯಕನಾಗಿರುವಾಗ ವಿಧಾನಸಭೆಯಲ್ಲಿ ಧರಣಿ ಮಾಡಿ ಬೇಡಿಕೆ ಸಲ್ಲಿಸಿದ್ದೆ. ಈ ಬಾರಿಯೂ ಕಂದಾಯ ಸಚಿವರಿಗೆ ಬೇಡಿಕೆ ಸಲ್ಲಿಸಿ  ಹೆಬ್ರಿಯನ್ನು ತಾಲೂಕು ಆಗಿ ಘೋಷಣೆ ಮಾಡಬೇಕು ಆಗ್ರಹಿಸಿದ್ದೆ. ಬಜೆಟ್‌ ಅನುಮೋದನೆಯ ಒಳಗಡೆ ಬೇಡಿಕೆಯನ್ನು ಈಡೇರಿಸಿ ಹೆಬ್ರಿಯನ್ನು ತಾಲೂಕನ್ನಾಗಿ ಘೋಷಣೆ ಮಾಡಲಿ ಎಂದು ಹೆಬ್ರಿ ತಾಲೂಕು ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಗೋಪಾಲ ಭಂಡಾರಿ ಆಗ್ರಹಿಸಿದ್ದಾರೆ.

ನೀರೆ ಕೃಷ್ಣ ಶೆಟ್ಟಿ ರಾಜೀನಾಮೆ
ರಾಜ್ಯ ಸರಕಾರ ಬಜೆಟ್‌ನಲ್ಲಿ ಹೆಬ್ರಿಯನ್ನು ತಾ|ಗಿ ಘೋಷಣೆ ಮಾಡದೆ‌ ಇದ್ದುದಕ್ಕೆ ಬೇಸರಗೊಂಡ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೆಬ್ರಿ ತಾಲೂಕು ರಚನೆ ಹೋರಾಟದ ರೂವಾರಿ ನೀರೆ ಕೃಷ್ಣ ಶೆಟ್ಟಿ  ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ  ತಿಳಿಸಿದ್ದಾರೆ. 

ಹಿಂದೆ ಬಿ.ಜೆ.ಪಿ.ಯ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌ ಅವರು ಸಹ ಹೆಬ್ರಿಯನ್ನು ಬಿಟ್ಟು ಉಳಿದ 43 ತಾಲೂಕುಗಳನ್ನು 4 ವರ್ಷ ಹಿಂದೆ ಘೋಷಣೆ ಮಾಡಿದ್ದರು. ಈಗ ಕಾಂಗ್ರೆಸ್‌  ಸರಕಾರದ ಈ ತೀರ್ಮಾನದಿಂದ ನೋವಾಗಿದೆ. ನಾನು ಮುಂದೆಯೂ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯನಾಗಿ ದುಡಿಯುತ್ತೇನೆ. ಕಾಂಗ್ರೆಸ್‌ ಪಕ್ಷದ ಮತ್ತು ಸರಕಾರದ ದೂರದೃಷ್ಟಿತ್ವ ಮತ್ತು ಮಾನದಂಡದ ತೀರ್ಮಾನದ ಮೇಲೆ ಬೇಸರ ವ್ಯಕ್ತಪಡಿಸುತ್ತೇನೆ. ಅಲ್ಲದೆ ಹೆಬ್ರಿ ತಾಲೂಕು ರಚನಾ ಸಮಿತಿಯ ಸಂಚಾಲಕತ್ವಕ್ಕೆ ಸಹ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು  ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಹೊಸದಾಗಿ ಕೆಲವು ತಾಲೂಕು ಗಳನ್ನು ಘೋಷಿಸಿದ್ದರೂ  ಬಹುಕಾಲದ ಬೇಡಿಕೆಯಾದ ಕಾರ್ಕಳ ತಾಲೂಕಿ ನಲ್ಲಿರುವ ಹೆಬ್ರಿಯನ್ನು ತಾಲೂಕ ನ್ನಾಗಿ ಘೋಷಿಸದೇ ಇರು ವುದು ಖಂಡನಾರ್ಹ. ತಾಲೂಕು ರಚನೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ಮಾಡಿಲ್ಲ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರಿಯಾದ ಯೋಜನೆಗಳು ಬಜೆಟ್‌ನಲ್ಲಿಲ್ಲ. ಇದು ವಿಶೇಷಗಳಿಲ್ಲದ ಬಜೆಟ್‌.
– ವಿ. ಸುನಿಲ್‌ ಕುಮಾರ್‌, ಕಾರ್ಕಳ ಶಾಸಕರು

57 ವರ್ಷಗಳಿಂದ ಹೋರಾಟ ಮಾಡುತ್ತಾ  ಬಂದಿರುವ ಹೆಬ್ರಿಯನ್ನು ಅವಗಣಿಸಿ ಏನೂ ಹೋರಾಟ ಮಾಡದ ಕಾಪುವನ್ನು ತಾಲೂಕನ್ನಾಗಿ ಘೋಷಣೆ ಮಾಡಿದ್ದು  ಹೆಬ್ರಿ ಜನತೆಗೆ ಮಾಡಿದ ಅನ್ಯಾಯ. ಈ ಬಗ್ಗೆ  ಉಗ್ರ ಹೋರಾಟ ನಡೆಸಲಾಗುವುದು.
– ಸುಧಾಕರ್‌ ಹೆಗ್ಡೆ, 
ಹೆಬ್ರಿ ಗ್ರಾ.ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next