Advertisement

ಹೆಬ್ರಿ ತಾಲೂಕು ರಚನೆಗೆ ತಾತ್ಕಾಲಿಕ ಕೆಲಸ ಆರಂಭ: ತಹಶೀಲ್ದಾರ್‌

01:10 AM Nov 30, 2018 | Team Udayavani |

ಕಾರ್ಕಳ: ನೂತನ ತಾಲೂಕು ಆಗಿ ರಚನೆಯಾದ ಹೆಬ್ರಿಯಲ್ಲಿ ಸರಕಾರಿ ಕೆಲಸಗಳನ್ನು ನಡೆಸಲು ಕೆಲವು ಉಪಕರಣಗಳು ಈಗಾಗಲೇ ಬಂದಿವೆ. ಭೂಮಿ ತಂತ್ರಾಂಶವನ್ನು ಕಾರ್ಕಳದಲ್ಲಿ ಅಳವಡಿಸಿದ್ದು, ತಾತ್ಕಾಲಿಕವಾಗಿ ಸರ್ವರ್‌ ಮೂಲಕ ಪ್ರಾರಂಭಿಸಲಾಗಿದೆ. ನಾಡಕಚೇರಿ ಅಲ್ಲಿ ಹಾಕಲು ಸಿದ್ಧತೆ ನಡೆಸಲಾಗಿದೆ. ಎಲ್ಲ ಕೆಲಸ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ  ಎಂದು ಕ್ಷೇತ್ರ ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಹೇಳಿದರು. ಕಾರ್ಕಳ ತಾ.ಪಂ. ಕಚೇರಿ ಸಭಾಂಗಣದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

Advertisement

ಸದಸ್ಯ ರಮೇಶ್‌ ಪೂಜಾರಿ ಅವರು ವಿಷಯ ಪ್ರಸ್ತಾವಿಸಿ, ಹೆಬ್ರಿ ತಾಲೂಕು ರಚನೆಯಾಗಿ ಹಲವು ಸಮಯ ಕಳೆದರೂ ಯಾವುದೇ ಸರಕಾರಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಾಲೂಕು ರಚನೆಯಾದರೂ ಜನರ ಸಮಸ್ಯೆ ಬಗೆಹರಿದಿಲ್ಲ ಎಂದರು. ಸರಕಾರಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಈಗಾಗಲೇ ಮಿನಿ ವಿಧಾನ ಸೌಧ ನಿರ್ಮಾಣಕ್ಕೂ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತೀ ಗುರುವಾರ ಉಪ ತಹಶೀಲ್ದಾರ್‌ ಅವರು ಅಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ತಹಶೀಲ್ದಾರ್‌ ತಿಳಿಸಿದರು.

ಕಿಂಡಿ ಅಣೆಕಟ್ಟು ಹಲಗೆ ಹಾಕಲು ಆಗ್ರಹ
ಈಗಾಗಲೇ ಕೃಷಿ ಭೂಮಿಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಆದರೂ ತಾಲೂಕಿನ ವಿವಿಧೆಡೆ ಇರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಕಾರ್ಯಕ್ಕೆ ಇನ್ನೂ ಮುಂದಾಗಲಿಲ್ಲ. ಇನ್ನಷ್ಟು ತಡವಾದರೆ ನೀರೇ ಇರುವುದಿಲ್ಲ ಎಂದು ಸದಸ್ಯರು ತಿಳಿಸಿದರು. ತಾ.ಪಂ. ಇಒ ಮಾತನಾಡಿ, ಈಗಾಗಲೇ ಹಲಗೆ ಅಳವಡಿಸುವ ಬಗ್ಗೆ ಸೂಚನೆ ನಿಡಲಾಗಿದೆ. ನೀರಿನ ಒತ್ತಡ ಹೆಚ್ಚಿರುವುದರಿಂದ ಕೆಲವು ಭಾಗಗಳ‌ಲ್ಲಿ ತೊಂದರೆಯಾಗಿತ್ತು. ಸದ್ಯ ಎಲ್ಲ ಕಡೆ ಹಾಕಲು ಸೂಚನೆ ನೀಡಲಾಗಿದೆ ಎಂದರು.

ಸದಸ್ಯ ಹರೀಶ್‌ ನಾಯಕ್‌ ಮಾತನಾಡಿ, ಅಜೆಕಾರು ಪೇಟೆಯ ಸ.ಹಿ.ಪ್ರಾ.ಶಾಲೆಯ ಕಟ್ಟಡ ಕುಸಿಯುವ ಹಂತದಲ್ಲಿದೆ. ಸುಮಾರು 100 ವರ್ಷ ಹಳೆಯ ಕಟ್ಟಡ ಇದಾಗಿದ್ದು. ದುರಸ್ತಿ ಬಗ್ಗೆ ಈ ಹಿಂದೆಯೂ ವಿಷಯ ಪ್ರಸ್ತಾವಿಸಲಾಗಿದೆ ಎಂದರು. ಹಳೆ ಕಟ್ಟಡದ ಪ್ರಸ್ತಾವನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಆಕ್ಷೇಪಣೆ ಬಂದಿದ್ದು, ಆಕ್ಷೇಪಣೆಯಂತೆ ಉಡುಪಿಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕಳುಹಿಸಲಾಗಿದೆ ಎಂದು ಇಲಾಖಾಧಿಕಾರಿ ತಿಳಿಸಿದರು. ಈ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಕಾರ್ಯನಿರ್ವಹಣಾ ಅಧಿಕಾರಿ ಅವರು ಹೇಳಿದರು.

ಹೆಬ್ರಿ-ಸೋಮೇಶ್ವರ-ಆಗುಂಬೆ ಭಾಗದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದ ಮರಗಳು ಹಾಗೂ ತುಂಡಾಗಿ ಬಿದ್ದ ವಿದ್ಯುತ್‌ ಕಂಬಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಈ ಬಗ್ಗೆ ಕಳೆದ ಬಾರಿಯ ಸಭೆಯಲ್ಲಿಯೂ ಆಗ್ರಹಿಸಲಾಗಿದೆ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯ ತಾ.ಪಂ. ಸದಸ್ಯೆ ಆಗ್ರಹಿಸಿದರು. ರಸ್ತೆಯ ಬದಿಯ ಮರಗಳು ಹಾಗೂ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸುವ ಬಗ್ಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಇಲಾಖಾಧಿಕಾರಿ ತಿಳಿಸಿದರು. ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

ಪೂರ್ಣಕಾಲಿಕ ವೈದ್ಯರ ನೇಮಿಸಿ
ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಅವರು ಮಾತನಾಡಿ, ದುರ್ಗಾ-ತೆಳ್ಳಾರು ಭಾಗದಲ್ಲಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಆದರೆ ಪೂರ್ಣಕಾಲಿಕ ವೈದ್ಯರು ಇಲ್ಲದೇ ಜನರಿಗೆ ತೊಂದರೆಯಾಗಿದೆ. ಆ ಭಾಗದಲ್ಲಿ ಬಸ್ಸಿನ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಪೂರ್ಣಕಾಲಿಕ ವೈದ್ಯರ ಆವಶ್ಯಕತೆ ಇದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next