Advertisement

Hebri: ಶ್ರಾವಣದಲ್ಲಿ ಮಿಂಚುವ ಹುರುಳಿ ಹೂವು, ಅಜ್ಜಿ ಓಡ್ಸೋದು!

03:46 PM Sep 04, 2024 | Team Udayavani |

ಹೆಬ್ರಿ: ಆಷಾಡ ಕಳೆದು ಬರುವ ಶ್ರಾವಣ ಮಾಸವೆಂದರೆ ಹಬ್ಬಗಳ ಮೆರವಣಿಗೆ. ಶ್ರಾವಣ ಶನಿವಾರ ಉಪವಾಸ, ವರಮಹಾಲಕ್ಷ್ಮೀ ಪೂಜೆ, ಚೂಡಿಪೂಜೆ ಹೀಗೆ ಹತ್ತು ಹಲವಾರು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಅದರಲ್ಲೂ ಶ್ರಾವಣ ಮಾಸದ ಒಂದು ತಿಂಗಳು ಹೊಸ್ತಿಲ ಪೂಜೆ ನಡೆಯುತ್ತದೆ. ಈ ಹೊಸ್ತಿಲ ಪೂಜೆಯಲ್ಲಿ ವಿಶೇಷ ಸ್ಥಾನ ಪಡೆಯುವ ಹುರುಳಿ ಹೂವು ಮತ್ತು ಅಜ್ಜಿ ಓಡಿಸುವ ಕಾರ್ಯಕ್ರಮ ಭಾರೀ ಕುತೂಹಲಕಾರಿ.

Advertisement

ಸಿಂಹ ಸಂಕ್ರಮಣ ಆರಂಭಗೊಂಡು ಒಂದು ತಿಂಗಳ ಕಾಲ ಮುತ್ತೈದೆಯರು ನಿತ್ಯ ತಲೆಗೆ ಸ್ನಾನ ಮಾಡಿ ಹೊಸ್ತಿಲು ಪೂಜೆ ಮಾಡುವುದು ವಿಶೇಷ. ಮೊದಲು ಹೊಸ್ತಿಲನ್ನು ಸ್ವತ್ಛವಾಗಿ ತೊಳೆದು, ಒಣ ಬಟ್ಟೆಯಿಂದ ಒರೆಸುತ್ತಾರೆ. ಬಳಿಕ ಜೇಡಿ ಮಣ್ಣಿನ ಉಂಡೆಯಿಂದ ಹೊಸ್ತಿಲಿಗೆ ಚಿತ್ತಾರ ಬಿಡಿಸಿ, ಅರಶಿನ ಕುಂಕುಮದಿಂದ ಹಾಗೂ ಬಗೆ ಬಗೆಯ ಸೋಣ ತಿಂಗಳಿನ ಹೂವುಗಳಿಂದ ಹೊಸ್ತಿಲ ಸಿಂಗಾರ ಮಾಡುತ್ತಾರೆ. ತುಳಸಿಗೂ ಜೇಡಿಮಣ್ಣಿನ ಉಂಡೆಯಿಂದ ರಂಗೋಲಿ ಬರೆದು ಹೂಗಳನ್ನಿಟ್ಟು  ನಮಸ್ಕರಿಸುತ್ತಾರೆ.

ಹುರುಳಿ ಹೂವಿನ ಶೃಂಗಾರ
ಹೊಸ್ತಿಲ ಪೂಜೆಯಲ್ಲಿ  ಹುರುಳಿ ಹೂವು ವಿಶೇಷ ಮಾನ್ಯತೆ ಪಡೆದಿದೆ. ಶ್ರಾವಣ ಸಂಕ್ರಾಂತಿಗೆ ಮೂರ್‍ನಾಲ್ಕು ದಿನಗಳಿರುವಾಗ ಮನೆಯ ಮುತ್ತೈದೆಯರು ಹುರುಳಿಯನ್ನು  ಅರಶಿನದೊಡನೆ ಸ್ವಲ್ಪ  ನೀರಿನೊಂದಿಗೆ ಕಲಸಿ ನೆನೆಸಿಟ್ಟು  ಸಂಕ್ರಾಂತಿಗೆ ಎರಡು ದಿನಗಳಿರುವಾಗ ಅದನ್ನು  ತೋಟಗಳಲ್ಲಿ  ಬಿತ್ತಿ ಅದಕ್ಕೆ  ಗಾಳಿ ತಾಗದಂತೆ ಡಬ್ಬಿಯನ್ನು  ಮುಚ್ಚಿಡುತ್ತಾರೆ. ಎರಡು ದಿನಗಳಲ್ಲಿ  ಅರಶಿನ ಬಣ್ಣ  ಮೆತ್ತಿಕೊಂಡ ಹುರುಳಿ ಗಿಡ ಮೊಳಕೆಯೊಡೆಯುತ್ತದೆ. ಹಳದಿ ಬಣ್ಣದ ಹೂವಿನಂತೆ ಕಾಣುವ ಗಿಡ ಹೊಸ್ತಿಲ ಪೂಜೆಗೆ ಬೇಕಾಗುವ ಅತೀ ಮುಖ್ಯ ಹೂವಾಗಿ ಹೊಸ್ತಿಲನ್ನು ಅಲಂಕರಿಸುತ್ತದೆ.

ನೀರ್‌ ಕಡ್ಡಿ
ಹಿಂದೆಲ್ಲ  ಮಣ್ಣಿನ ಸ್ಲೇಟ್‌ಗಳಲ್ಲಿ ಬರೆದುದನ್ನು ಒರೆಸಲು ಬಳಸುತ್ತಿದ್ದ ನೀರ್‌ ಕಡ್ಡಿಯೂ ಹೊಸ್ತಿಲು ಪೂಜೆಗೆ ಬಳಕೆ ಆಗುತ್ತದೆ. ಮನೆಯ ಆಸುಪಾಸಿನಲ್ಲಿ, ಬೈಲು ಗದ್ದೆಗಳಲ್ಲಿ  ಬೆಳೆಯುವ ನೀರು ಕಡ್ಡಿ ತಂದು ಶುಭ್ರಗೊಳಿಸಿ ಹುರುಳಿ ಹೂವಿನೊಂದಿಗೆ ಹೊಸ್ತಿಲ ಅಲಂಕಾರ ಮಾಡುತ್ತಾರೆ.

Advertisement

ಅಜ್ಜಿ ಓಡಿಸುವ ಸಂಪ್ರದಾಯ ಆಚರಣೆ ಹೇಗೆ?
ಪ್ರತಿನಿತ್ಯದ ಪೂಜೆಯಂತೆ ತುಳಸಿಕಟ್ಟೆ ಹಾಗೂ ಅಜ್ಜಿ ಹೊಸ್ತಿಲನ್ನು ಸಿಂಗರಿಸುತ್ತಾರೆ. ಕೇವಲ ಹುರುಳಿ ಹೂ, ನೀರ್‌ಕಡ್ಡಿ ಮಾತ್ರವಲ್ಲದೆ ಹುಧ್ದೋಳ್‌ ಹೂ, ರಥ ಪುಷ್ಪ  ಹೀಗೆ ಹತ್ತು ಹಲವು ಬಗೆಯ ಹೂವಿನಿಂದ ಹೊಸ್ತಿಲ ಪೂಜೆ ಮಾಡುತ್ತಾರೆ. ಹೊಸ್ತಿಲ ಮೇಲೆ ಬಾಳೆ ಎಲೆಯಲ್ಲಿ ಉದ್ದಿನ ದೋಸೆ, ಅರಳು, ಬೆಲ್ಲ, ಬೆಂಕಿಯಲ್ಲಿ ಕಾಯಿಸಿದ ಹಲಸಿನ ಬೀಜ ಮೊದಲಾದ ವಸ್ತುಗಳನ್ನು ಇಟ್ಟು ಪೂಜಿಸಿ, ಪೂರ್ವಜರನ್ನು ಸ್ಮರಿಸುತ್ತಾರೆ.

ತದನಂತರ ಪೂಜೆ ಮಾಡಿದ ವ್ಯಕ್ತಿಯು ಬಾಗಿಲ ಮೂಲೆಯಲ್ಲಿ ಅಡಗಿಕೊಂಡಿರುತ್ತಾರೆ. ಮನೆಯ ಸದಸ್ಯರು ಬಾಳೆ ಎಲೆಯಲ್ಲಿರಿಸಿದ ತಿನಿಸುಗಳನ್ನು ಬಾಳೆ ಎಲೆಯ ಸಹಿತವಾಗಿ  ಕದ್ದೊಯ್ಯಲು ಪ್ರಯತ್ನಿಸುತ್ತಾರೆ. ಆಗ ಕದ್ದೊಯ್ಯುವ ವ್ಯಕ್ತಿಗೆ ಅಜ್ಜಿಯ ಕೋಲಿನಿಂದ ಹೊಡೆಯಲು ಪ್ರಯತ್ನಿಸಿದಾಗ “ಅಜ್ಜಿ ಓಡಿತು! ಆಜ್ಜಿ ಓಡಿತು!’ ಎಂದು ಕೂಗಿ ಸಂಭ್ರಮಿಸುತ್ತಾರೆ. ಆ ಪ್ರಸಾದವನ್ನು ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಸವಿಯುವುದು ಸಂಪ್ರದಾಯ. ಈ ಅಜ್ಜಿ ಎಂದರೆ ಲಕ್ಷ್ಮೀ ದೇವಿ ಇರಬಹುದು. ಮಳೆಗಾಲದ ಆರಂಭದಲ್ಲಿ ಮನೆ ಸೇರುವ ಅಜ್ಜಿಯನ್ನು ಶ್ರಾವಣದಲ್ಲಿ ಕಳುಹಿಸಿಕೊಡುವ ಸಂಪ್ರದಾಯ ಇದು. ಉತ್ತಮ ಬೆಳೆಯಾದರೆ ಅಜ್ಜಿಯನ್ನು ಸಂಭ್ರಮದಿಂದ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಬರಗಾಲವಿದ್ದರೆ ಅಜ್ಜಿ ಓಡಿಸುವ ಸಂಪ್ರದಾಯ ಮಾಡುವುದಿಲ್ಲ ಎನ್ನುತ್ತಾರೆ ಧಾರ್ಮಿಕ ಚಿಂತಕರಾದ ನೀರೆ ಕೃಷ್ಣ ಶೆಟ್ಟಿ.

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next