ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾದ್ಯಂತ ರವಿವಾರ ಕೆಥೋಲಿಯನ್ನರು ಮೊಂತಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೋ ಕೆಥೆಡ್ರಲ್‌ನಲ್ಲಿ ತೆನೆ ಆಶೀರ್ವದಿಸಿ ಹಬ್ಬದ ಬಲಿಪೂಜೆ ಅರ್ಪಿಸಿದರು.
ಬಲಿಪೂಜೆಯಲ್ಲಿ ಪ್ರವಚನ ನೀಡಿದ ಅವರು, ತಾಯಿಯಾಗಿ ಜಗತ್ತಿಗೆ ಆದರ್ಶವಾಗಬೇಕಾದ ಸ್ತ್ರೀಯರ ಮೇಲೆ ನಿರಂತರ ಹಲ್ಲೆ, ಅತ್ಯಾಚಾರ ಗಳು ನಡೆಯುತ್ತಿರುವುದು ವಿಷಾದ ನೀಯ. ತಾಯಿಯನ್ನು ಜಗತ್ತಿನಲ್ಲಿ ಮೀರಿಸಲು ಯಾರಿಂದಲೂ ಅಸಾಧ್ಯ ಎಂದರು. ಚರ್ಚ್‌ನ ಪ್ರಧಾನ ಧರ್ಮ ಗುರು ವಂ. ಅಲ್ಫೆಡ್ ಪಿಂಟೊ ಬಲಿಪೂಜೆಯಲ್ಲಿದ್ದರು.
ಉಡುಪಿಯ ಶೋಕಮಾತಾ ಚರ್ಚ್ ನಲ್ಲಿ ಧರ್ಮಗುರು ರೆ| ಫಾ| ಚಾರ್ಲ್ಸ್ ಮಿನೇಜಸ್ ತೆನೆಗಳಿಗೆ ಆಶೀರ್ವದಿಸಿ ವಿಶೇಷ ಬಲಿಪೂಜೆ ನಡೆಸಿದರು.
ಮಹಿಳೆಯರು ಮತ್ತು ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಅರ್ಪಿಸಿ ಭಕ್ತಿಯಿಂದ ನಮನ ಸಲ್ಲಿಸಿದರು. ದೇವಾಲಯಗಳಲ್ಲಿ ಶ್ರದ್ಧೆ ಮತ್ತು ಭಕ್ತಿಪೂರ್ವಕ ಧಾರ್ಮಿಕ ಕಾರ್ಯಗಳು ನಡೆದ ಬಳಿಕ ಭತ್ತದ ತೆನೆಯನ್ನು ಮನೆಗೆ ತಂದು ಹೊಸ ಅಕ್ಕಿಯ ಅನ್ನ ತಯಾರಿಸಿ ಕುಟುಂಬಿಕರು ಸಹಭೋಜನ ಮಾಡಿದರು.