ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಪ್ರೇರಿತ್ ಎಂಬ ಮಗುವನ್ನು ಗುರುವಾರ (ಸೆ.13) ಬೆಳಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ತಾಯಿ ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆಗೆಂದು ಕರೆತಂದಿದ್ದ ವೇಳೆ ಮಗುವಿನ ದೇಹದಲ್ಲಿ ತೀವ್ರ ಗಾಯಗಳು ಪತ್ತೆಯಾಗಿವೆ.
ಮಗುವಿನ ದೇಹದ ಮೇಲಿನ ಗಾಯಗಳನ್ನು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿದ ದೂರಿನನ್ವಯ ಶುಕ್ರವಾರ ಅಮಾಸೆಬೈಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗುವಿನ ದೇಹದ ಮೇಲಿನ ಗಾಯಗಳ ಬಗ್ಗೆ ತಾಯಿ ಪೂರ್ಣಪ್ರಿಯಾ ಕೂಡಾ ಯಾವುದೇ ಮಾಹಿತಿ ನೀಡದೇ ಇದ್ದು, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದರಿಂದ ಗಾಯಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಾಯಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಪ್ರತಿಕ್ರಿಯೆ ನೀಡಿದ್ದು, ಮಗವಿನ ದೇಹದ ಮೇಲೆ ಗಾಯದ ಕಲೆಯಿದೆ. ಮೇಲ್ನೋಟಕ್ಕೆ ಗಂಭೀರವಾಗಿ ಹಲ್ಲೆ ಮಾಡಿರುವುದು ಗೊತ್ತಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ ಮಾಹಿತಿಯಂತೆ ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಮಗುವಿನ ಆರೋಗ್ಯ ವಿಚಾರಿಸಿ ವರದಿ ಪಡೆದಿದ್ದೇವೆ. ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಕ್ಕಳ ರಕ್ಷಣಾ ಘಟಕ ಅಮಾವಾಸ್ಯೆ ಬೈಲು ಠಾಣೆಯಲ್ಲಿ ದೂರು ದಾಖಲಿಸಿದೆ
ಮಗು ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಲಿದ್ದೇವೆ