Advertisement
ಕಬ್ಬಿನಾಲೆಯ ಬಮ್ಮ ಗುಂಡಿ ನದಿಯಲ್ಲಿ ಹಠಾತ್ ನೆರೆ ಬಂದಿದೆ. ಹಲವು ಮನೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಸಮಸ್ಯೆ ಸೃಷ್ಟಿಸಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ.ನ ಬಲ್ಲಾಡಿ ಗ್ರಾಮ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಪರಿಣಾಮ ಹತ್ತಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. 2 ಕಾರು, 2 ಬೈಕ್ ನೀರಿನಲ್ಲಿ ಕೊಚ್ಚಿಹೋಗಿವೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಬರುವ ಈ ಪ್ರದೇಶದಲ್ಲಿ ಮಧ್ಯಾಹ್ನ 2.30ರಿಂದ 5ರ ವರೆಗೆ ಭಾರೀ ಸಿಡಿಲು ಗಾಳಿಯಿಂದ ಕೂಡಿದ ಮಳೆ ಸುರಿಯಿತು. ನದಿಯಲ್ಲಿ ಹಠಾತ್ ಅಗಿ ಕೆಸರು ಮಿಶ್ರಿತ ತುಂಬಿದ ನೀರು ಹರಿದು ಬಂದಿದೆ. ಹೊಸಕಂಬ ಕೃಷ್ಣ ಪೂಜಾರಿ ಅವರ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಪಕ್ಕದ ಕೇರಳ ಮೂಲದ ಕುಟುಂಬದ ನಿವಾಸಿ ನಿಲ್ಲಿಸಿದ್ದ ಆಲ್ಟೋ ಕಾರು ಹಾಗೂ ಎರಡು ಬೈಕ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ವಾಹನಗಳು ಮನೆಯ ತೋಟದಲ್ಲಿ ಸಿಲುಕಿಕೊಂಡಿದೆ. ಜಲಾವೃತಗೊಂಡ ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಗಿದೆ. ಹಲವಾರು ಮನೆಗಳು ಅರ್ಧದಷ್ಟು ಮುಳುಗಿವೆ.
Related Articles
ಭಾರೀ ಮಳೆಯಿಂದ ನೀರಿನ ರಭಸಕ್ಕೆ ಸುಮಾರು 25ಕ್ಕೂ ಮಿಕ್ಕಿ ಗದ್ದೆಗಳ ಪೈರುಗಳು ಹಾಗೂ ಅಡಿಕೆ, ಬಾಳೆ ತೋಟಗಳು ಹಾನಿಗೊಳಗಾಗಿವೆ ಎಂದು ಬಲ್ಲಾಡಿ ಚಂದ್ರಶೇಖರ್‌ಭಟ್ ತಿಳಿಸಿದ್ದಾರೆ.
Advertisement
ಕಾಂತಬೈಲು ಸುತ್ತಮುತ್ತಲಿನ ಪರಿಸರದ 15ಕ್ಕೂ ಮಿಕ್ಕಿ ಹಸು ಕರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಸ್ಥಳೀಯರಾದ ಶುಭದರ ಶೆಟ್ಟಿ ತಿಳಿಸಿದ್ದಾರೆ. ಗುಮ್ಮ ಗುಂಡಿ ಪರಿಸರದಲ್ಲಿ ಹಸುವಿನ ಹಟ್ಟಿಯೊಂದು ಕುಸಿದು ಬಿದ್ದಿದೆ. 3 ತಾಸು ಅವಧಿಯಲ್ಲಿ 18 ಸೆಂ.ಮೀ. ಮಳೆ ಸುರಿದಿರಬಹುದು ಎಂದು ಅಂದಾಜಿಸಲಾಗಿದೆ. ವೃದ್ಧೆ ಪ್ರವಾಹದ ಪಾಲು ಶಂಕೆ
ನೇರಲ್ಪಕ್ಕೆ 85 ವರ್ಷ ಪ್ರಾಯದ ಚಂದ್ರ ಗೌಡ್ತಿ ಮನೆ ಹೊರಗಿನ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಮೂಡಿದ್ದು ರಾತ್ರಿ 9ರ ತನಕ ಹುಡುಕಾಡಿದರೂ ವೃದ್ಧೆ ಪತ್ತೆಯಾಗಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ. ಇದೇ ಮೊದಲು ಇಷ್ಟೊಂದು ಪ್ರವಾಹ
ಕಾರ್ಕಳ, ಹೆಬ್ರಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಜಲಪ್ರವಾಹ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೀತಾ ನದಿಯಲ್ಲಿ ನೆರೆ ಬಂದು ರಸ್ತೆಗೆ ಹರಿದು ರಸ್ತೆ ಬಂದ್ ಆಗುವುದು ಸಾಮಾನ್ಯ. ಆದರೆ ಇಂತಹ ಜಲಪ್ರಳಯ ಸಂಭವಿಸಿದ್ದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಹಾಗೂ ಸದಸ್ಯರು ಭೇಟಿ ನೀಡಿದ್ದಾರೆ. ಹೆಬ್ರಿ ತಹಶೀಲ್ದಾರ್ ಪ್ರಸಾದ್ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ರಾತ್ರಿ ಆಗಿರುವುದರಿಂದ ಹಾನಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ ಸೋಮವಾರ ಬೆಳಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಘಾಟಿ ಪ್ರದೇಶದ ಮಳೆ ಪ್ರಭಾವ
ಆಗುಂಬೆ ಘಾಟಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಕಬ್ಬಿನಾಲೆ ಗುಡ್ಡ ಬೆಟ್ಟಗಳಲ್ಲಿ ಒಂದೇ ಸವನೆ ನೀರು ನುಗ್ಗಿ ಬಂದ ಪರಿಣಾಮ ಅನಾಹುತ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.