ಹೆಬ್ರಿ: ಹೊಳೆಯಲ್ಲಿ ಸುಮಾರು 70 ಅಡಿ ದೂರದವರಗೆ ಈಜಾಡುತ್ತಾ ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಮನೆಗೆ ವಿದ್ಯುತ್ ಸಂಪರ್ಕ ನೀಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶಿವಪುರ ಗ್ರಾಮದ ಉಪ್ಪಳ ಮೂರು ಸಾಲು ಹೊಳೆಯ ಮಧ್ಯದಲ್ಲಿ ಹಾದುಹೋದ ವಿದ್ಯುತ್ ತಂತಿ ತುಂಡಾಗಿ ಹಲವಾರು ದಿನಗಳು ಕಳೆದಿತ್ತು. ವಿಪರೀತ ಮಳೆಯಿರುವ ಕಾರಣ ದುರಸ್ತಿ ಮಾಡಲಾಗದೆ ಹಾಗೆ ಉಳಿದಿತ್ತು.
ಈ ಪರಿಸರದ ಜನ ವಿದ್ಯುತ್ ಮೋಟರ್ ಗಳನ್ನು ಬಳಸಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ವಿಷಯ ತಿಳಿದ ದಾವಣಗೆರೆ ಚೆನ್ನಗಿರಿ ಮೂಲದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಹಾಗೂ ಅರೆಕಾಲಿಕ ಸಿಬ್ಬಂದಿ ಸುಧೀರ್ ಸಹಾಯದೊಂದಿಗೆ ಕೇವಲ ಇಬ್ಬರೇ ತೆರಳಿ ಸಮಸ್ಯೆ ಬಗೆಹರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿದ್ಯುತ್ ತಂತಿಯ ಒಂದು ತುದಿಗೆ ಹಗ್ಗವನ್ನು ಕಟ್ಟಿ ಸುಮಾರು 70 ಅಡಿ ದೂರಕ್ಕೆ ಈಜಾಡಿಕೊಂಡು ಹೋಗಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿಪಡಿಸಿ ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿದ್ದಾರೆ.
ಪ್ರಮೋದ್ ಅವರು ಕಳೆದ 2 ವರ್ಷದ ಹಿಂದೆ ಹೆಬ್ರಿ ಮೆಸ್ಕಾಂ ಗೆ ಸಿಬ್ಬಂದಿಯಾಗಿ ನೇಮಕಾತಿಗೊಂಡಿದ್ದು ಮೊದಲಿಂದಲೇ ಈಜನ್ನು ಕರಗತ ಮಾಡಿಕೊಂಡಿದ್ದರು.