Advertisement

Hebri Cloud Burst: ಇಂಥ ದುರಂತ, ಪ್ರವಾಹ ಈ ಹಿಂದೆ ಆಗಿದ್ದೇ ನೆನಪಿಲ್ಲವೆಂದ ಹಿರಿಯರು

01:42 AM Oct 08, 2024 | Team Udayavani |

ಕಾರ್ಕಳ/ಹೆಬ್ರಿ: ನಿನ್ನೆ ತನಕವೂ ಸುತ್ತಮುತ್ತಲಿರುವ ಬೆಟ್ಟಗುಡ್ಡಗಳೇ ತಡೆಗೋಡೆ ಯಾಗಿದ್ದವು. ಮನೆ ಪಕ್ಕ ಹರಿಯುವ ಜರಿಯೇ ಜೀವಸೆಲೆಯಾಗಿತ್ತು. ಆದರಿಂದು ಆಶ್ರಯವಿತ್ತ ಸೂರು ಧರಾಶಾಯಿಯಾಗಿದೆ. ಮನೆಯೊಳಗೆಲ್ಲ ನೀರು, ಕೆಸರು ತುಂಬಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವನಕ್ಕೆ ಆಧಾರವಾಗಿದ್ದ ಕೃಷಿ
ಭೂಮಿ ಸರ್ವನಾಶ ವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಜಾನುವಾರು ಕಣ್ಣ ಮುಂದಿಲ್ಲ. ನಿನ್ನೆಯಿದ್ದ ಚಿತ್ರಣ ಇಂದು ಬದಲಾಗಿದೆ.

Advertisement

ರವಿವಾರ ಹೆಬ್ರಿ ಭಾಗದಲ್ಲಿ ಸಂಭವಿಸಿದ ಮೇಘಸ್ಫೋಟ ಮಾದರಿಯ ಜಲಪ್ರಳಯಕ್ಕೆ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಮುದ್ರಾಡಿ, ಕಬ್ಬಿನಾಲೆ ಸಹಿತ ಬಲ್ಲಾಡಿ ಗ್ರಾಮಗಳು ನಲುಗಿ ಹೋಗಿವೆ. ಬಹುತೇಕ ಜನವಸತಿ ಪ್ರದೇಶಗಳು ತತ್ತರಿಸಿ ಹೋಗಿದ್ದವು. ಹಟ್ಟಿಯಲ್ಲಿದ್ದ ಜಾನುವಾರು, ಮನೆಯಂಗಳದಲ್ಲಿದ್ದ ಸೊತ್ತುಗಳು ಕಣ್ಮರೆಯಾಗಿವೆ. ಗೃಹೋಪಯೋಗಿ ವಸ್ತುಗಳು ಕೆಟ್ಟು ಹೋಗಿವೆ. ಪ್ರವಾಹಕ್ಕೆ ಒಳಗಾಗಿ ನಷ್ಟಕ್ಕೆ ಸಿಲುಕಿದ ಮಂದಿ ಮತ್ತೆ ಬದುಕು ಕಟ್ಟುವ ತವಕದಲ್ಲಿದ್ದರು. ಅಳಿದುಳಿದ ಮನೆಯ ಸಾಮಗ್ರಿಗಳನ್ನು ಸಂಗ್ರಹಿಸಿಡುವಲ್ಲಿ ನಿರತರಾಗಿದ್ದರು. ಮನೆಯೊಳಗೆ ನುಗ್ಗಿದ ಮಣ್ಣು ಮಿಶ್ರಿತ ಕೆಸರನ್ನು ಮನೆಯಿಂದ ಹೊರಹಾಕುವುದರಲ್ಲಿ ತಲ್ಲೀನರಾಗಿದ್ದಾರೆ.

ಕೃಷಿ ಭೂಮಿಗೆ ಹೆಚ್ಚು ಹಾನಿ
ಕೃಷಿಕರೊಬ್ಬರ 5 ಸಾವಿರ ತೆಂಗಿನಕಾಯಿ, ರಬ್ಬರ್‌ ಸಾðಪ್‌, ಎರಡು ಪಂಪ್‌ಗ್ಳು, ಸಹಿತ ಕೃಷಿ ಸಲಕರಣೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ವರಂಗ, ಬಲ್ಲಾಡಿ ಸಂಪರ್ಕ ರಸ್ತೆ ಕಡಿತಗೊಂಡಿದೆ. ಹಲವು ಒಳ ರಸ್ತೆಗಳಿಗೆ ಹಾನಿಯಾಗಿದೆ. ಕಾಂತರಬೈಲು ಪರಿಸರ 25ಕ್ಕೂ ಜಾನುವಾರುಗಳು ಕಣ್ಮರೆಯಾಗಿವೆ. ದನ, ಕರುಗಳನ್ನು ಕಳೆದುಕೊಂಡ ಕೃಷಿಕರ ಬದುಕು ದುಸ್ತರವಾಗಿದೆ. ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಈಶ್ವರ ನಗರ, ಹನ್ಸನ್ಬೆಟ್ಟು, ಗುಮ್ಮಿಗುಂಡಿ, ವರಂಗ ಗ್ರಾಮದ ಅಡ್ಕ ಬಳಿಯ ಸುಮಾರು 200 ಎಕ್ರೆಗೂ ಅಧಿಕ ಭತ್ತ ಕೃಷಿಯು ಹಾನಿಯಾಗಿರುವುದರಿಂದ ಕೃಷಿಕರು ಕಂಗಲಾಗಿದ್ದಾರೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿ ಪ್ರಮಾಣ ಸಂಗ್ರಹದಲ್ಲಿ ತೊಡಗಿದ್ದರು.

ಪ್ರಕೃತಿಯೇ ಮುನಿದರೆ ಬದುಕು ಹೇಗೆ?
ಪ್ರಕೃತಿ ಮುನಿದರೆ ಮನುಕುಲದ ನಾಶ ಎನ್ನುವುದನ್ನು ಮೊದಲ ಬಾರಿಗೆ ಘಟನೆ ಕಾರ್ಕಳ, ಹೆಬ್ರಿ ಭಾಗದ ಜನತೆಗೆ ಮನದಟ್ಟು ಮಾಡಿದೆ. ಇಷ್ಟು ವರ್ಷ ಕೇಳರಿಯದ ದುರಂತವೊಂದು ಪಶ್ಚಿಮ ಘಟ್ಟ ತಪ್ಪಲಿನ ಈ ಭಾಗದಲ್ಲಿ ಸಂಭವಿಸಿದೆ. ದಟ್ಟ ಕಾಡು, ಗುಡ್ಡಗಳ ನಡುವೆ ಸದಾ ಪ್ರಕೃತಿ ಮಡಿಲಲ್ಲಿ ಬದುಕಿ ಇಲ್ಲಿನ ಪ್ರಕೃತಿಯೊಂದಿಗೆ ಅದರ ಒಡನಾಟದಲ್ಲಿ ಬೆಳೆದು ಬಂದವರೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮುಂದೇನು ಎಂಬ ಎಲ್ಲರಲ್ಲೂ ಮೂಡಿದೆ.

ತಮ್ಮ ಪಾಡಿಗೆ ತಾವಿದ್ದರು
ಬೆಂಕಿಪೊಟ್ಟಣವಿಲ್ಲ ಎಂದರೂ ಅವರು ಹತ್ತಾರು ಕಿ.ಮೀ. ಬರಬೇಕು. ಅವರಾರದೂ ಸುಖ ಜೀವನವಲ್ಲ. ಹೊರಪ್ರಪಂಚದಿಂದ ದೂರ ವಿದ್ದುಕೊಂಡು ತಾವಾಯಿತು ತಮ್ಮ ತೋಟ ಗದ್ದೆಯಾಯಿತು ಎಂಬಂತೆ ಬದುಕಿದವರು. ಇಂಥವರು ಇವತ್ತು ಕೃಷಿ ಭೂಮಿ, ಫ‌ಸಲು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಘಟನೆ ಕಲ್ಪಿಸಿಕೊಂಡಿರಲಿಲ್ಲ
ಇದೇ ಮೊದಲ ಬಾರಿಗೆ ಇಂಥದ್ದೊಂದು ದುರಂತ ಸಂಭವಿಸಿದೆ. ಇಂಥ ಪ್ರವಾಹ ಈ ಹಿಂದೆ ಬಂದಿರುವುದು ಹಿರಿಯರಿಗೂ ನೆನಪಿಲ್ಲ ಎನ್ನುತ್ತಿದ್ದಾರೆ ಎಂದು ಮುದ್ರಾಡಿ ಗ್ರಾ.ಪಂ. ಸದಸ್ಯರಾದ ಶುಭಧರ ಶೆಟ್ಟಿ ಹಾಗೂ ಸಂತೋಷ್‌ಕುಮಾರ್‌ ಶೆಟ್ಟಿ.

ನೆರೆಹಾವಳಿ ಪ್ರದೇಶಕ್ಕೆ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌, ಮುದ್ರಾಡಿ ಗ್ರಾ.ಪಂ.ಅಧ್ಯಕ್ಷೆ ವಸಂತಿ ಪೂಜಾರಿ ಹಾಗೂ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಶೆಟ್ಟಿ, ಎಸಿ ಮಹೇಶ್ಚಂದ್ರ ತಹಶೀಲ್ದಾರ್‌ ಪ್ರಸಾದ್‌, ಕಂದಾಯ ಹಾಗೂ ಇತರ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ನನಗೆ ತಿಳಿದೇ ಇಲ್ಲ
ನನಗೆ ತಿಳಿದಂತೆ ಈ ರೀತಿ ಆಗಿದ್ದು ಹಿಂದೆಂದೂ ಇಲ್ಲ. ಈ ಸಲವೇ ಇಂಥದ್ದೊಂದು ದೊಡ್ಡ ದುರಂತ ಆಗಿದೆ. ನೆರೆ ನೀರು ಹೇಗೆ ಬಂತು ಎನ್ನುವುದೆ ನಮಗೆ ಗೊತ್ತಾಗಲಿಲ್ಲ. ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎನ್ನುತ್ತಾರೆ 75 ವರ್ಷದ ಸೂರಯ್ಯ ಪೂಜಾರಿ.

ಕೊಚ್ಚಿ ಹೋದ ವೃದ್ಧೆ ಪತ್ತೆ: 
ಬಲ್ಲಾಡಿ ಪರಿಸರದ ನೀರಲ್‌ ಪಲ್ಕೆ ನಿವಾಸಿ 85 ವರ್ಷ ಪ್ರಾಯದ ಚಂದ್ರ ಗೌಡ್ತಿ ಮನೆಯ ಹೊರ ಭಾಗದಲ್ಲಿದ್ದು ನೆರೆಯ ರಭಸಕ್ಕೆ ಕೊಚ್ಚಿ ಹೋಗಿದ್ದು, ಸೋಮವಾರ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಗಳು ಮನೆಯೊಳಗೆ ಕೆಲಸ ಮಾಡುತ್ತಿದ್ದು, ನೆರೆ ನೀರು ಬರುತ್ತಿದ್ದಂತೆ ಹೆದರಿ ಅಮ್ಮ ಅಮ್ಮ ಎಂದು ಕೂಗಿ ಹೊರಬರುವಾಗ ತಾಯಿ ಕಾಣದ ಹಾಗೆ ಜೋರಾಗಿ ಬೊಬ್ಬೆ ಹಾಕಿದ್ದರು. ಮನೆ ಮಂದಿ ಹತ್ತಿರದಲ್ಲಿ ನಡೆಯುವ ಯೋಜನೆಯ ಮೀಟಿಂಗ್‌ಗೆ ಹೋಗಿದ್ದರು. ಕೂಡಲೇ ಅವರೆಲ್ಲ ಬಂದು ಹುಡುಕಾಡಿದರು ಮಹಿಳೆ ಕಾಣಿಸಲಿಲ್ಲ. 4 ದಿನಗಳ ಹಿಂದೆಯಷ್ಟೇ ಈ ವೃದ್ಧೆ ಮಗಳ ಮನೆಗೆ ಬಂದಿದ್ದರು.

ಬಂಡೆಕಲ್ಲು ಗದ್ದೆಯಲ್ಲಿ!
ನೀರಿನ ರಭಸಕ್ಕೆ ಬೃಹದಾಕಾರದ ಬಂಡೆಕಲ್ಲೊಂದು ನೀರಿನಲ್ಲಿ ಕೊಚ್ಚಿ ಹೋಗಿ ಗದ್ದೆಯ ಮಧ್ಯಭಾಗದಲ್ಲಿ ಕಾಣಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಕಾರು ನೀರಿನಲ್ಲಿ ಕೊಚ್ಚಿ ಹೋಗುವ ಆರಂಭಕ್ಕೆ ಅಡಿಕೆ ಮರಗಳಿಗೆ ತಾಗಿ ಅಡಿಕೆ ಮರ ಉರುಳಿ ಬಿದ್ದಿದೆ. ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಪ್ರವಾಹ ತಗ್ಗಿದ ಬಳಿಕ ಪತ್ತೆಯಾಗಿದೆ.

ಒಂದು ತಿಂಗಳ ಹಿಂದೆ ನಿಗೂಢ ಶಬ್ದ
ಒಂದು ತಿಂಗಳ ಹಿಂದೆಯಷ್ಟೇ ಕಬ್ಬಿನಾಲೆಯ ಕಾಪೋಳಿ ಪರಿಸರದಲ್ಲಿ ಬೃಹತ್‌ ಶಬ್ದ ಕೇಳಿಸಿದ್ದು ಮನೆ ಎಲ್ಲ ಕಂಪಿಸಿತ್ತು ಎಂದು ಕಾಪೋಳಿ ನಿವಾಸಿಯೊಬ್ಬರು ತಿಳಿಸಿದ್ದಾರೆ. 2 ತಿಂಗಳ ಹಿಂದೆ ಬಲ್ಲಾಡಿ ಪರಿಸರದಲ್ಲೂ ಇಂತಹ ಶಬ್ದ ಕೇಳಿಸಿತು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿಯ ಶಬ್ದ ಮಡಿಕೇರಿ ಪರಿಸರದಲ್ಲೂ ಆಗಿ ಮುಂದೆ ಪ್ರವಾಹವಾಗಿ ಪರಿಣಮಿಸಿತ್ತು ಎಂದು ಸ್ಥಳೀಯರು ನೆನಪಿಸುತ್ತಿದ್ದಾರೆ.

ವಯನಾಡ್‌ನ‌ಂತೆ ಭಾಸವಾಯಿತು
ಮನೆಯ ಹೊರಗಡೆ ಬಂದು ನೋಡುತ್ತಿದ್ದಂತೆ ರೌದ್ರ ನರ್ತನದ ನೆರೆ ಮನೆಯ ಸಮೀಪದ ಮನೆಯನ್ನು ಆವರಿಸಿದ್ದು, ಅಚ್ಚರಿ ಮೂಡಿಸಿ ವಯನಾಡ್‌ ಘಟನೆಯನ್ನು ನೆನಪಿಸಿತು. ಮಳೆಯ ರಭಸದ ನೀರಿನೊಂದಿಗೆ ಬೃಹದಾಕಾರದ ಕಲ್ಲು ದ್ವಿಚಕ್ರ ವಾಹನ, ಕಾರುಗಳು ತೇಲುತ್ತಿರುವುದು ಭಯ ಹುಟ್ಟಿಸಿತು. ನೆರೆ ನೀರು ಮೇಲೆರುತ್ತಿದಂತೆ ಮನೆ ಒಳಗೆ ಹೋಗಿ ನಿಂತ ಪ್ರಭಾಕರ್‌ ದಂಪತಿಯ ಕೂಗು ಹೊರ ಭಾಗದಲ್ಲಿ ಕೇಳಿಸುತ್ತಿತ್ತು.

20 ಅಡಿ ಉದ್ದದ ಏಣಿಯನ್ನು ಮನೆಯ ಕಿಟ್ಟಿಗೆ ಅಳವಡಿಸಿ ಉದ್ದವಾದ ಹಗ್ಗದಿಂದ ಮರಕ್ಕೆ ಕಟ್ಟಿ ದಂಪತಿ ಅವರನ್ನು ಹರ ಸಹಾಸ ಪಟ್ಟು ಮನೆಯಿಂದ ಹೊರ ತಂದ ದೃಶ್ಯ ಮನ ಕುಲುಕುವಂತಿತ್ತು. ನನ್ನ ಜೀವಮಾನದಲ್ಲಿ ಇಂಥ ನೆರೆಯನ್ನು ನಾನು ಕಂಡಿಲ್ಲ ಎಂದು ನೆರೆಯ ಪ್ರತ್ಯಕ್ಷದರ್ಶಿ ಶಾಮ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next