ಅಜ್ಜಂಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಬಿ.ಎಸ್.ವೈ. ನಾಯಕತ್ವದ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶ, ಬಡವರು ಹಾಗೂ ರೈತರ(ಗಾವ್ -ಗರೀಬ್-ಕಿಸಾನ್)ಪರವಾಗಿವೆ. ಈ ಮೂರೂ ವರ್ಗದವರ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
ಪಟ್ಟಣದ ಬಳಿಯ ಹೆಬ್ಬೂರು ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸ ಸಾಗರ ಡ್ಯಾಂಗೆ ನೀರು ಹರಿಸಲು ಹೆಬ್ಬೂರು ಬಳಿಯ ರೈಲ್ವೆ ಮಾರ್ಗಕ್ಕೆ ಸುರಂಗ ನಿರ್ಮಾಣ ಅತ್ಯಗತ್ಯವಾಗಿತ್ತು. ಈ ಕಾರ್ಯ 8 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಚೆಗೆ ಇಲಾಖೆಯಿಂದ ಅನುಮತಿ ನೀಡಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ವಿವಿಧ ಜಿಲ್ಲೆಗಳ 6 ಲಕ್ಷ ಎಕರೆ ಕೃಷಿಭೂಮಿಗೆ ನೀರು ಕೊಂಡೊಯ್ಯಲು ಅನುಕೂಲ ಆಗಲಿದೆ. ಲಕ್ಷಾಂತರ ರೈತರಿಗೆ ನೆರವಾಗಲಿದೆ ಎಂದರು.
ಸುರಂಗ ಮಾರ್ಗ ನಿರ್ಮಾಣ 31 ದಿನಗಳಲ್ಲಿ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲು ಶ್ರಮಿಸಿದ ರೈಲ್ವೆ, ಜಲಸಂಪನ್ಮೂಲ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹೆಬ್ಬೂರು ಬಳಿಯ ರೈಲ್ವೆ ಮಾರ್ಗದಲ್ಲಿ ಅಂಡರ್ ಪಾಸಿಂಗ್ ನಿರ್ಮಾಣದಿಂದ ರೈತರಿಗೆ ಅನುಕೂಲ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ದೇಶಾದ್ಯಂತ ಇರುವ ಅಂಡರ್ ಪಾಸಿಂಗ್‌ನಲ್ಲಿಯೂ ಈ ಸಮಸ್ಯೆ ಆಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆದಿದೆ ಎಂದು ಉತ್ತರಿಸಿದರು. ಸುರಂಗ ಮಾರ್ಗ ನಿರ್ಮಾಣ ವೇಳೆ ಹೆಚ್ಚುವರಿ ಹಳಿ ಅಳವಡಿಸಲಾಗಿದೆ. ಇದರಿಂದ ಗ್ರಾಮದ 30 ಮನೆಯೊಳಕ್ಕೆ ಮಳೆ ನೀರು ಹರಿದು ಸಮಸ್ಯೆಯುಂಟಾಗಿದೆ. ರೈಲ್ವೆ ಮಾರ್ಗದಂಚಿನಲ್ಲಿ ಚರಂಡಿ ನಿರ್ಮಿಸಿ, ಪರಿಹಾರ ಕಲ್ಪಿಸಿ ಎಂದು ಮುಖಂಡ ಹೆಬ್ಬೂರು ನಾಗೇಂದ್ರ, ಸಚಿವರಿಗೆ ಮನವಿ ಮಾಡಿದರು.
ಸಂಸದ ಸಿದ್ದೇಶ್ವರ್, ಮೈಸೂರು ಎಡಿಆರ್ ಎಂ.ಅಪರ್ಣಾ ಗಾರ್ಗ, ನೈರುತ್ಯ ರೈಲ್ವೆ ವ್ಯವಸ್ಥಾಪಕ ವಿಜಯ್‌ಕುಮಾರ್ ಸಿಂಗ್, ಇಲಾಖೆಯ ಜಗದೀಶ್, ಭದ್ರಾ ಮೇಲ್ದಂಡೆ ಯೋಜನೆ ಇಂಜಿನಿಯರ್ ಸುರೇಶ್, ರಾಕೇಶ್, ಲಮಣಿ, ಜಗದೀಶ್, ಗುತ್ತಿಗೆದಾರ ವೆಂಕಟರಾವ್, ಉಪವಿಭಾಗಾಧಿ ಕಾರಿ ರೇಣುಕಾ ಪ್ರಸಾದ್, ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಪಿಎಸ್‌ಐ ಬಸವರಾಜು ಮತ್ತಿತರರಿದ್ದರು.
ನಾನು ನರೇಂದ್ರ ಮೋದಿ , ಯಡಿಯೂರಪ್ಪ ಅವರಲ್ಲಿ ವಿಶ್ವಾಸ ಇರಿಸಿದ್ದೇನೆ. ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆಯಿಟ್ಟು ಚುನಾಯಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ನನ್ನದು. ಸಂಸದನಾದ ಬಳಿಕ ಹತ್ತಾರು ಬಾರಿ ಭದ್ರಾ ಕಾಮಗಾರಿ ಸ್ಥಳ ವೀಕ್ಷಿಸಿದ್ದೇನೆ. ಅಧಿಕಾರಿಗಳು, ಸಚಿವರನ್ನು ಭೇಟಿ ಮಾಡಿದ್ದೇನೆ. ಕಾಮಗಾರಿ ಚುರುಕುಗೊಳಿಸಲು ಗುತ್ತಿಗೆದಾರರ ಮೇಲೆ ಒತ್ತಡ ಹೇರಿದ್ದೇನೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2 ವರ್ಷಗಳಲ್ಲಿ ಭದ್ರಾ ನೀರು ವಾಣಿವಿಲಾಸ ಸಾಗರ ಸೇರಲಿದೆ.
-ನಾರಾಯಣಸ್ವಾಮಿ, ಚಿತ್ರದುರ್ಗ ಸಂಸದರು