Advertisement

ಹೆಬ್ಬುಲಿ ಹೊಸ ದಾಖಲೆ: ಮೊದಲ ದಿನದ ಕಲೆಕ್ಷನ್‌ 8 ಕೋಟಿ

09:13 AM Feb 26, 2017 | |

ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರವು ಬಿಡುಗಡೆಯಾಗಿ, ಬಾಕ್ಸ್‌-ಆಫೀಸ್‌  ಧೂಳಿಪಟ ಮಾಡುತ್ತಿದೆ. ಗುರುವಾರ ಬಿಡುಗಡೆಯಾದ ಈ ಚಿತ್ರ ಮೂರು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಇನ್ನು ಕಲೆಕ್ಷನ್‌ ವಿಷಯದಲ್ಲಿ ನೋಡಿದರೆ, ಚಿತ್ರದ ಮೊದಲ ದಿನದ ಕಲೆಕ್ಷನ್‌ ಹೊಸ ದಾಖಲೆ ಬರೆದರೆ, ಮೊದಲ ವಾರದ ಕಲೆಕ್ಷನ್‌ ಸಹ ದಾಖಲೆಯಾಗಿ ಉಳಿಯಲಿದೆ. ಚಿತ್ರದ ನಿರ್ಮಾಪರಾದ ರಘುನಾಥ್‌ ಮತ್ತು ಉಮಾಪತಿ ಅವರು ಸೇಫ್ ಆಗಿರುವುದಷ್ಟೇ ಅಲ್ಲ, ಚಿತ್ರವನ್ನು ದೊಡ್ಡ ಬೆಲೆಗೆ ಕೊಂಡಿರುವ ವಿತರಕರು ಸಹ ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಬಾಕ್ಸ್‌ಆಫೀಸ್‌ನಲ್ಲಿ “ಹೆಬ್ಬುಲಿ’ ಘರ್ಜನೆ ಹೇಗಿದೆ ಎಂದರೆ ಅದಕ್ಕೆ ಉತ್ತರ ಕೊಡುತ್ತಾರೆ ವಿತರಕ ಜಾಕ್‌ ಮಂಜು. ಅವರು ಬೆಂಗಳೂರು ಮತ್ತು ಮೈಸೂರು ಪ್ರದೇಶಗಳಿಗೆ ಚಿತ್ರವನ್ನು ವಿತರಿಸಿದ್ದಾರೆ. ಚಿತ್ರದ ಕಲೆಕ್ಷನ್‌ ಹೇಗಾಗುತ್ತಿದೆ ಎಂದು ಮಂಜು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

“”ಇದು ನಿಜಾನಾ, ಸುಳ್ಳಾ ಅಂತ ಪದೇಪದೇ ಕೇಳಿಕೊಳ್ಳುವಂತಾಗಿದೆ. ಆ ಮಟ್ಟಿಗೆ “ಹೆಬ್ಬುಲಿ’, ಬಾಕ್ಸ್‌-ಆಫೀಸ್‌ ನಲ್ಲಿ ದಾಖಲೆ ಮಾಡಿದೆ’ ಎನ್ನುತ್ತಾರೆ ಜಾಕ್‌ ಮಂಜು. ಅವರು ಬಿಕೆಟಿ ಮತ್ತು ಮೈಸೂರು ಪ್ರದೇಶಗಳಿಗೆ ಚಿತ್ರವನ್ನು ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲ, “ಹೆಬ್ಬುಲಿ’ ಚಿತ್ರದ ವಿತರಣೆಯ ವಿಷಯದಲ್ಲಿ ನಿರ್ಮಾಪಕರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಹೇಳುವಂತೆ, “ಹೆಬ್ಬುಲಿ’ ಚಿತ್ರವು ಕನ್ನಡ ಚಿತ್ರರಂಗದಲ್ಲಿಯೇ ಹೊಸದೊಂದು ದಾಖಲೆ ಮಾಡಿ ಮುನ್ನುಗ್ಗುತ್ತಿದೆಯಂತೆ. ಅಷ್ಟೇ ಅಲ್ಲ, ಪ್ರೇಕ್ಷಕರು ಸಹ ಕನ್ನಡ ಚಿತ್ರಗಳ ಕೈಬಿಟ್ಟಿಲ್ಲ ಎಂದು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರಂತೆ. “ನಿಜ ಹೇಳುತ್ತೀನಿ. ಈ ತರಹದ್ದೊಂದು ಕ್ರೇಜ್‌ ನಾನು ಕಂಡಿರಲಿಲ್ಲ. ಕೇಳಿರಲಿಲ್ಲ.

“ಕಬಾಲಿ’ ಮುಂತಾದ ದೊಡ್ಡ ದೊಡ್ಡ ಪರಭಾಷಾ ಚಿತ್ರಗಳು ಬಂದಾಗ, ಮಧ್ಯರಾತ್ರಿ ಮತ್ತು ಬೆಳಿಗ್ಗೆ ಮುಂಚೆ ಪ್ರದರ್ಶನಗಳು ಕಾಣುತ್ತಿದ್ದವು. ಹೆಚ್ಚೆಂದರೆ, 20 ಚಿತ್ರಮಂದಿರಗಳಲ್ಲಿ ಹಾಗೆ ಪ್ರದರ್ಶನ ಕಂಡಿದ್ದಿದೆ. ಕನ್ನಡದಲ್ಲೂ ಕೆಲವು ಕಡೆ ರಾತ್ರಿ ಮತ್ತು ಬೆಳಗ್ಗಿನ ಪ್ರದರ್ಶನಗಳಾಗಿವೆ. ಆದರೆ, “ಹೆಬ್ಬುಲಿ’ ಚಿತ್ರವು ಏನಿಲ್ಲವೆಂದರೂ 60 ಚಿತ್ರಮಂದಿರಗಳಲ್ಲಿ ತಡರಾತ್ರಿ ಮತ್ತು ಬೆಳಗ್ಗಿನ ಪ್ರದರ್ಶನ ಕಂಡಿದೆ. ಚಿತ್ರದ ಮೊದಲ ಪ್ರದರ್ಶನ ಶುರುವಾಗಿದ್ದು ದಾವಣಗೆರೆಯಲ್ಲಿ.

ಪುಷ್ಪಾಂಜಲಿ ಮತ್ತು ಅಶೋಕ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಮಧ್ಯರಾತ್ರಿ ಪ್ರದರ್ಶನ ಶುರುವಾಗಿತ್ತು. ಆ ನಂತರ ಮತ್ತೆ ಮೂರು ಗಂಟೆಗೆ ಇನ್ನೊಂದು ಪ್ರದರ್ಶನವಾಯಿತು. ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಿಗ್ಗೆ ಐದಕ್ಕೆ ಪ್ರದರ್ಶನ ಶುರುವಾಯಿತು. ತಿಪಟೂರು, ಮಂಡ್ಯ, ಮೈಸೂರು, ಕೊಳ್ಳೇಗಾಲ … ಎಲ್ಲಾ ಕಡೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿತ್ತು. ಬೆಳಗ್ಗಿನ ಪ್ರದರ್ಶನಗಳಿಂದಲೇ 50ರಿಂದ 60 ಲಕ್ಷ ದುಡ್ಡು ಬಂದಿದೆ ಎಂದರೆ, ಓಪನಿಂಗ್‌ ಯಾವ ಮಟ್ಟಿಗಿತ್ತು ಎಂದು ಊಹಿಸಬಹುದು’ ಎನ್ನುತ್ತಾರೆ ಮಂಜು. ಮಂಜು ಪ್ರಕಾರ ಮೊದಲ ದಿನದ ಕಲೆಕ್ಷನ್‌ ಸುಮಾರು ಎಂಟು ಕೋಟಿಯಾಗಿದೆಯಂತೆ. “ಒಟ್ಟು 425 ಪ್ಲಸ್‌ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಇದು ಬರೀ ಕರ್ನಾಟಕದ ಲೆಕ್ಕವಷ್ಟೇ. ಬೇರೆ ಕಡೆ ಬಿಡುಗಡೆಯಾದ ಲೆಕ್ಕ ಬೇರೆ ಇದೆ. ಈ ಎಲ್ಲಾ ಚಿತ್ರಮಂದಿರಗಳಿಂದ ಕಲೆಕ್ಷನ್‌ ತೆಗೆದುಕೊಂಡರೆ, 8 ಕೋಟಿಯಷ್ಟಾಗುತ್ತದೆ. ಮೊದಲ ನಾಲ್ಕು ದಿನದ ಲೆಕ್ಕ ತೆಗೆದುಕೊಂಡರೆ 25ರಿಂದ 30 ಕೋಟಿಯವರೆಗೂ ಕಲೆಕ್ಷನ್‌ ಸಿಗುತ್ತದೆ.

ಚಿತ್ರದ ಮೊದಲ ವಾರದ ಕಲೆಕ್ಷನ್‌ ಎಷ್ಟಾಗಬಹುದು ಎಂಬುದು ಈಗಲೇ ಹೇಳುವುದು ಕಷ್ಟ. ಸೋಮವಾರದ ನಂತರವಷ್ಟೇ ಹೇಳಬಹುದು. ಆದರೆ, ಮೊದಲ ನಾಲ್ಕು ದಿನಗಳ ಲೆಕ್ಕ ಹೇಳಬಹುದು. ಪ್ರಮುಖವಾಗಿ ಮೂರು ದಿನಗಳ ಕಾಲ ರಜೆ ಇದೆ. ಎಲ್ಲಾ ಶೋಗಳು ಹೌಸ್‌ಫ‌ುಲ್‌ ಆಗುತ್ತಿವೆ. ಹಾಗಾಗಿ ಈ ನಾಲ್ಕು ದಿನಗಳ ಕಲೆಕ್ಷನ್‌ ನೋಡಿದರೆ, 25ರಿಂದ 30 ಕೋಟಿಯವರೆಗೂ ಆಗುತ್ತದೆ. ಈ ತರಹದ್ದೊಂದು ಕಲೆಕ್ಷನ್‌ ಈ ಹಿಂದೆಯಂತೂ ಆಗಿಲ್ಲ. ಇದಕ್ಕಿಂತ ಒಳ್ಳೆಯ ಸಿನಿಮಾಗಳು ಬಂದರೆ, ದಾಖಲೆ ಮುರಿಯಬಹುದೇನೋ? 

Advertisement

ಆದರೆ ಈ ಚಿತ್ರ ಮಾತ್ರ, ಕನ್ನಡ ಚಿತ್ರರಂಗಕ್ಕೊಂದು ದೊಡ್ಡ ಮಾರುಕಟ್ಟೆ ಇದೆ ಎಂದು ತೋರಿಸಿಕೊಟ್ಟಿದೆ’ ಎನ್ನುತ್ತಾರೆ ಮಂಜು. 

Advertisement

Udayavani is now on Telegram. Click here to join our channel and stay updated with the latest news.

Next