ಬೆಳಗಾವಿ: ಕೋವಿಡ್ ಸಂಕಷ್ಟದಲ್ಲಿರುವ ಕೆಲವು ವರ್ಗಗಳು ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದು ಅಂತಹವರಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ಪರಿಹಾರ ಪ್ಯಾಕೇಜ್‌ಗಳನ್ನು ನೀಡಲಾಗಿದೆ. ಆದರೆ ಈ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯದಿಂದ ಕೆಲವರು ಹೊರಗುಳಿದಿದ್ದಾರೆ. ಅಂತವರನ್ನು ಗುರುತಿಸಿ ನೆರವಿಗೆ ಬರುವಂತೆ ಮನವಿ ಮಾಡಿದರು.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೋವಿಡ್ ಯೋಧರು ಎಂದು ಪರಿಗಣಿಸಿ ವೈದ್ಯಕೀಯ ವಿಮಾ ಯೋಜನೆಯನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೊಲೀಸ್ ಅದಿಕಾರಿಗಳು, ಸಿಬ್ಬಂದಿ, ಹೋಮ್ ಗಾರ್ಡ್ಸ್, ಪೌರ ರಕ್ಷಣಾ ದಳ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ, ಬಂದಿಖಾನೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಯಾನಿಟೆ„ಸರ್ ಕೆಲಸಗಾರರು ಮತ್ತು ಅವರಿಗೆ ಸಂಬಂಧಿಸಿದ ವಾಹನ ಚಾಲಕರು, ಲೋಡರ್‌ಗಳು ರೋಗದಿಂದ ಮƒತಪಟ್ಟಲ್ಲಿ 30 ಲಕ್ಷ ರೂ. ಪರಿಹಾರ ಒದಗಿಸುವ ಆದೇಶ ಹೊರಡಿಸಿರುವುದು ಶ್ಲಾಘನೀಯ ಎಂದು ಹೆಬ್ಟಾಳಕರ ಹೇಳಿದರು.
ಇದೇ ರೀತಿ ಕೋವಿಡ್ -19 ಕಾರ್ಯಾಚರಣೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಗ್ರಾಮ ಮಟ್ಟದ ಕಾರ್ಯಪಡೆಯ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ತಹಸಿಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಶಿಕ್ಷಣ ಇಲಾಖೆಯ ಶಿಕ್ಷಕ ವೃಂದದವರು ಮತ್ತಿತರ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ವಿದ್ಯುತ್ ಪ್ರಸರಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರ ಅನೇಕ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವೈದ್ಯಕೀಯ ವಿಮೆ ಯೋಜನೆಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ 6 ಲಕ್ಷ ಗಾಮೆಂìಟ್ಸ್ ನೌಕರರು, 3 ಲಕ್ಷ ಬೀಡಿ ಕಾರ್ಮಿಕರು, 25 ಲಕ್ಷ ಕೃಷಿ ಕೂಲಿಕಾರರು, 6 ಲಕ್ಷ ಹೆ„ನುಗಾರಿಕೆ ಕೆಲಸಗಾರರು, 5 ಲಕ್ಷ ಕಟ್ಟಡ ಕಾರ್ಮಿಕರು, 4 ಲಕ್ಷ ಬ್ಯೂಟಿ ಪಾರ್ಲರ್ ಸಿಬ್ಬಂದಿ, 8 ಲಕ್ಷ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸುಮಾರು 60 ಲಕ್ಷ ಮಹಿಳಾ ಉದ್ಯೋಗಿಗಳಿದ್ದು ಲಾಕ್ ಡೌನ್ ನಿಂದಾಗಿ ಇವರ ಉದ್ಯೋಗಕ್ಕೆ ತಡೆಬಿದ್ದಿದೆ. ಕಮ್ಮಾರರು ಹಾಗು ಬಡಿಗೇರ ಉದ್ಯೋಗಿಗಳ ಸಹ ಬದುಕು ಬೀದಿಗೆ ಬಿದ್ದಿದೆ. ಇವರಿಗೆ ವಿಶೇಷ ಭತ್ಯೆಯ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಹಲವಾರು ರೀತಿಯ ಸ್ವಯಂ ಉದ್ಯೋಗಿಗಳೂ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದಾರೆ. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ತಕ್ಷಣ ಇಂತವರ ನೆರವಿಗೆ ಬಂದು ಧನಸಹಾಯ ನೀಡಬೇಕು ಎಂದು ಹೆಬ್ಟಾಳಕ ಮನವಿ ಮಾಡಿದರು.