Advertisement

ಗುಡುಗು ಸಹಿತ ಭಾರೀ ಗಾಳಿ-ಮಳೆ: ವಿವಿಧೆಡೆ 

11:26 AM May 10, 2018 | |

ಪುತ್ತೂರು: ಕೋಡಪದವು, ಏತಡ್ಕ, ಇಡ್ಕಿದು, ಬದಿಯಡ್ಕ, ಜಾಲ್ಸೂರು, ಉರುವಾಲು, ಬಳ್ಪ, ಕೇನ್ಯ, ಕಲ್ಲಾಜೆ, ಮರ್ಕಂಜ, ಕಳಂಜ, ಕಲ್ಮಡ್ಕ, ಎಣ್ಮೂರು ಭಾಗಗಳಲ್ಲಿ ಮಂಗಳವಾರ ಸಂಜೆಯಿಂದ ತೊಡಗಿ ತಡರಾತ್ರಿವರೆಗೆ ಉತ್ತಮ ಮಳೆಯಾಗಿದೆ.

Advertisement

ಪುತ್ತೂರು ತಾಲೂಕಿನ ಕುಂಡಡ್ಕ- ಚೆನ್ನಾವರ ರಸ್ತೆ ಮಧ್ಯೆ ಹಲಸಿನ ಮರವೊಂದು ಮುರಿದು ಬಿದ್ದು, ಸಂಚಾರಕ್ಕೆ ತಡೆಯಾಗಿತ್ತು. ಬಳಿಕ ಊರವರೇ ಮರವನ್ನು ತೆರವುಗೊಳಿಸಿದರು. ವಿವಿಧೆಡೆ ತೋಟಗಳಲ್ಲಿ ಅಡಿಕೆ, ಬಾಳೆಗಿಡಗಳಿಗೆ ಹಾನಿಯಾಗಿದೆ. ಸರ್ವೆಯಲ್ಲಿ ಮರಬಿದ್ದು ಕಮ್ಮಾರ ಶಾಲೆಯೊಂದು ಸಂಪೂರ್ಣ ಹಾನಿಯಾಗಿದೆ.

ಪುಣ್ಚತ್ತಾರು ಶ್ರೀ ಹರಿಭಜನ ಮಂದಿರದ ಬಳಿ ಗುಡ್ಡ ಕುಸಿದು ಹಾನಿಯಾಗಿದೆ. ಹಲವೆಡೆ ಮಳೆ ನೀರು ಹರಿಯಲು ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ನಿಂತಿತ್ತು. ಕೆಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು, ಇಳೆ ತಂಪಾಗಿದೆ. ಕೃಷಿಕರಿಗೂ ಮಳೆ ಖುಷಿ ತಂದಿದೆ.

ಗೋಡೆ, ಛಾವಣಿಗೆ ಹಾನಿ
ಸುಬ್ರಹ್ಮಣ್ಯ:
ಮಂಗಳವಾರ ಸಂಜೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿ ಲಕ್ಷ್ಮಣ ಗೌಡ ಅವರ ಮನೆಗೆ ಸಿಡಿಲು ಬಡಿದು ಗೋಡೆ ಹಾಗೂ ಛಾವಣಿಗೆ ಹಾನಿಯಾಗಿದೆ. ಅವರ ಮನೆಗೆ ಅಳವಡಿಸಿದ್ದ ವೈರಿಂಗ್‌ ಹೊತ್ತಿ ಉರಿದು ನಷ್ಟ ಉಂಟಾಗಿದೆ. ಮುಖ್ಯ ಪೇಟೆ ಬಳಿಯ ಹೊನ್ನಪ್ಪ ಎಂಬವರ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಈ ಭಾಗದಲ್ಲಿ ಹಲವು ಮನೆ ಹಾಗೂ ಕೊಟ್ಟಿಗೆಗೆ ಸಿಡಿಲು ಬಡಿದಿದೆ.

Advertisement

ಸಂಜೆ ನಾಲ್ಕರಿಂದ ನಡುರಾತ್ರಿ ತನಕವೂ ಮಳೆಯಾಗಿದೆ. ಸಿಡಿಲು, ಮಿಂಚಿಗೆ ವಿದ್ಯುತ್‌ ಪರಿವರ್ತಕ ಕೇಂದ್ರಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಪರಿಣಾಮ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕತ್ತಲೆಯಲ್ಲಿ ರಾತ್ರಿ ಕಳೆಯಬೇಕಾಯಿತು. ಬುಧವಾರ ಸಂಜೆ ತನಕವೂ ಈ ಭಾಗಗಳಿಗೆ ವಿದ್ಯುತ್‌ ಸರಬರಾಜು ಅಗಿರಲಿಲ್ಲ. ದೂರವಾಣಿ ಹಾಗೂ ಮೊಬೈಲ್‌ ಸಂಪರ್ಕ ಕಡಿತಗೊಂಡ ಕಾರಣ ಕೊಲ್ಲಮೊಗ್ರು, ಬಾಳುಗೋಡು, ಹರಿಹರ, ಕಲ್ಮಕಾರು ಭಾಗದ ಜನತೆ ಹೊರಭಾಗದ ಸಂಪರ್ಕ ಕಡಿತಗೊಂಡು ತೀರಾ ಸಂಕಷ್ಟ ಅನುಭವಿಸಿದರು.

ಸುಬ್ರಹ್ಮಣ್ಯ ನಗರ ಸಹಿತ ಈ ಭಾಗದ ಪ್ರಮುಖ ಸಂಪರ್ಕ ರಸ್ತೆಗಳ ಬದಿ ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ನೀರು ಕಿರು ಸೇತುವೆ ಮೇಲ್ಭಾಗದಲ್ಲಿ ಹರಿದು ರಸ್ತೆಗೆ ನುಗ್ಗಿ ಕೆಸರು ತುಂಬಿದ ರಸ್ತೆಗಳಲ್ಲಿ ಸಂಚಾರ ಕಷ್ಟಕರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next