Advertisement

ಭಾರೀ ಗಾಳಿ-ಮಳೆ: ಅಮ್ಮನವರತೊಪ್ಲು ಶಾಲೆ ಕಟ್ಟಡಕ್ಕೆ ಹಾನಿ

01:39 AM Jul 10, 2022 | Team Udayavani |

ಉಪ್ಪುಂದ: ಶುಕ್ರವಾರ ಸಂಜೆ ಹಾಗೂ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಉಪ್ಪುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಮ್ಮನವರತೊಪ್ಲು ಕಿ.ಪ್ರಾ. ಶಾಲೆಯ ಕಟ್ಟಡ ನೆಲಕ್ಕುರುಳಿದೆ.

Advertisement

ಮೂರು ತರಗತಿ ಕೊಠಡಿಗಳ ಹೆಂಚಿನ ಛಾವಣಿ ಹಾರಿಹೋಗಿ ಮೈದಾನಕ್ಕೆ ಬಿದ್ದಿದೆ. ಗೋಡೆಗಳು ಭಾಗಶಃ ಬಿದ್ದು ಹೋಗಿವೆ. ಬಿರುಕು ಬಿಟ್ಟಿರುವ ಗೋಡೆಗಳು ಯಾವುದೇ ಕ್ಷಣದಲ್ಲೂ ಬೀಳುವ ಭೀತಿ ಇದೆ.

ಹೆತ್ತವರ ಆಗ್ರಹ
ಇಲ್ಲಿ ಒಟ್ಟು 88 ವಿದ್ಯಾರ್ಥಿಗಳಿದ್ದು, ರಜೆಯ ಕಾರಣ ಶಾಲೆಗೆ ಬಂದಿರಲಿಲ್ಲ. ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದರೂ ತೆರವುಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿಲ್ಲ, ಮಳೆಗಾಲವಾದ್ದರಿಂದ ಶಿಕ್ಷಕರು ಎಲ್ಲ ಮಕ್ಕಳನ್ನು ಅನಿವಾರ್ಯವಾಗಿ ಮತ್ತೊಂದು ಕಟ್ಟಡದ ತರಗತಿ ಕೋಣೆಯಲ್ಲಿ ಕೂರಿಸಿ ಪಾಠ ಮಾಡು ತ್ತಾರಾದರೂ ಬೇಸಗೆಯಲ್ಲಿ ಇದೇ ಕಟ್ಟಡದಲ್ಲಿ ಪಾಠ ನಡೆಸುತ್ತಾರೆ. ಆದ್ದರಿಂದ ಶಿಥಿಲ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಹೆತ್ತವರು ಆಗ್ರಹಿಸಿದ್ದಾರೆ.

ಶಾಸಕರ ಭೇಟಿ
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪರಿಶೀಲಿಸಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಕೃತಿ ವಿಕೋಪದಡಿ ಅನುದಾನ ಒದಗಿಸು ವಂತೆ ಸೂಚನೆ ನೀಡಿದರು.

ಕೊಲ್ಲೂರು: ಸಿದ್ಧೇಶ್ವರ ದೇಗುಲ ಜಲಾವೃತ
ಕೊಲ್ಲೂರು: ಇಲ್ಲಿ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಲ್ಲೂರಿನ ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದ್ದು, ಶನಿವಾರ ಶುಕ್ಷತೀರ್ಥದ ಶ್ರೀ ಸಿದ್ಧೇಶ್ವರ ದೇಗುಲವು ಸಂಪೂರ್ಣವಾಗಿ ಜಲಾವೃತಗೊಂಡಿತು. ದೇಗುಲದ ಶ್ರೀ ದೇವರ ಲಿಂಗದವರೆಗೆ ನೀರು ಭರ್ತಿಯಾಗಿದೆ.

Advertisement

ಬಂಟ್ವಾಳ: ನದಿ ನೀರಿನ ಮಟ್ಟ ಏರಿಕೆ
ಬಂಟ್ವಾಳ: ಬಂಟ್ವಾಳದಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಸಂಜೆಯ ವೇಳೆಗೆ ನೀರಿನ ಮಟ್ಟ ಕೊಂಚ ಏರಿಕೆಯಾಗಿತ್ತು. ಬೆಳಗ್ಗೆ 6.1 ಮೀ.ನಷ್ಟಿದ್ದ ನೀರಿನ ಮಟ್ಟ ಮಧ್ಯಾಹ್ನ 6.8 ಮೀ.ಗೆ ಏರಿಕೆಯಾಗಿ ಸಂಜೆ 7.3 ಮೀ.ಗೆ ಏರಿದೆ. ಎರಡು ದಿನಗಳ ಹಿಂದೆ ನೀರಿನ ಮಟ್ಟ 8 ಮೀ.ಗೆ ಏರಿಕೆಯಾಗಿ ಪ್ರವಾಹ ಬರುವ ಪರಿಸ್ಥಿತಿ ಇದ್ದರೂ ಬಳಿಕ ಇಳಿಕೆಯಾಗಿತ್ತು. ನೀರು ಏರಿಕೆಯಾಗಿ ಯಾವ ಕ್ಷಣದಲ್ಲೂ ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ತಾಲೂಕು ಆಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next