ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಊರುಗಳಿಗೆ ತೆರಳಲು ಮೆಜೆಸ್ಟಿಕ್ ಕಡೆಗೆ ಧಾವಿಸಿದರಿಂದ ಶನಿವಾರ ಮಧ್ಯಾಹ್ನದಿಂದಲೇ ಆ ಭಾಗದ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಶನಿವಾರದಿಂದ ಮೂರು ದಿನಗಳ ಕಾಲ ಸಾಲು ರಜೆ ಹಾಗೂ ಶನಿವಾರ ವಾರಾಂತ್ಯವಾದರಿಂದ ಮಧ್ಯಾಹ್ನ ಒಂದು ಗಂಟೆಯಿಂದಲೇ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು, ಬಸ್, ರೈಲು ಹಿಡಿಯಲು ಮಜೆಸ್ಟಿಕ್ ಕಡೆ ಆಗಮಿಸಿದರು. ಹೀಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಂಡೆ ಇತ್ತು.
ಇನ್ನು ಖಾಸಗಿ ವಾಹನಗಳಲ್ಲಿ ಸಾರ್ವಜನಿಕರು ತೆರಳಿದರಿಂದ ಆನಂದರಾವ್ ವೃತ್ತ, ರೇಸ್ ಕೋರ್ಸ್ ರಸ್ತೆ, ಮೌರ್ಯ ವೃತ್ತ, ಚಾಲುಕ್ಯ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್‌ಎಂಸಿ ಯಾರ್ಡ್, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಇತ್ತು. ಹೀಗಾಗಿ ವಾಹನಗಳು ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾಯಿತು. ಈ ಮಧ್ಯೆ ಹಬ್ಬ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿತ್ತು.
ಕೆಲವರು ವಾರದ ಮೊದಲೇ ಸೀಟು ಕಾಯ್ದಿರಿಸಿದ್ದರು. ಹೀಗಾಗಿ ನೇರವಾಗಿ ಬಸ್ ಹತ್ತಲು ಬಂದ ಪ್ರಯಾಣಿಕರು ಸರ್ಕಾರಿ ಬಸ್‌ಗಳು ಸಿಗದೆ, ಹೆಚ್ಚುವರಿ ಪ್ರಯಾಣ ದರ ನೀಡಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಅಲ್ಲದೆ, ನಗರದ ವಿವಿಧೆಡೆಯಿಂದ ಬಸ್ ಹಾಗೂ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಂದ ಆಟೋ ಚಾಲಕರು ಸಹ ದುಬಾರಿ ಹಣ ಪಡೆಯುತ್ತಿದ್ದರು.
ದುಬಾರಿ ಪ್ರಯಾಣ ದರ: ಖಾಸಗಿ ಬಸ್ ಮಾಲೀಕರು ಮಂಗಳೂರು, ಶಿವಮೊಗ್ಗ, ಉತ್ತರ ಕರ್ನಾಟಕ, ಮಡಿಕೇರಿ, ಉಡುಪಿ, ಮುಂಬೈ, ಹೈದ್ರಾಬಾದ್, ಚೆನ್ನೈ ಸೇರಿ ದೂರದ ಊರುಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದಾರೆ. ಮುಂಗಡ ಟಿಕೆಟ್ ಜತೆಗೆ ನೇರವಾಗಿ ಬಸ್ ಹತ್ತುವ ಪ್ರಯಾಣಿಕರಿಗೆ ಇನ್ನಷ್ಟು ಅಧಿಕ ಪ್ರಯಾಣ ದರ ಪಡೆಯುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದರು. ಮತ್ತೂಂದಡೆ ಕೆಎಸ್‌ಆರ್‌ಟಿಸಿಗೆ ಆಗಮಿಸಿದ ಸಾವಿರಾರು ಮಂದಿಗೆ ಬಸ್‌ಗಳ ಬಗ್ಗೆ ಮಾಹಿತಿ ನೀಡಲು ಪ್ರವೇಶ್ವ ದ್ವಾರದಲ್ಲೇ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು.