ಬೆಳಗಾವಿ: ಗಡಿಯ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮುಸುಳಧಾರ ಮಳೆ ಮುಂದುವರಿದಿದ್ದು, ವೇದಗಂಗಾ, ದೂಧಗಂಗಾ, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿವೆ. ರಾಷ್ಟೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದ್ದು, ಪರ್ಯಾಯ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
ಕಳೆದ ಮೂರು ದಿನಗಳಿಂದ ಮಳೆ ನಿರಂತರವಾಗಿದ್ದು, ಬೆಳಗಾವಿ ಗಡಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ ಕಡೆಗಳಿಂದ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಕಡೆಗೆ ತೆರಳುವ ವಾಹನಗಳನ್ನು ಪ್ರಮುಖ ಪಾಯಿಂಟ್ ಆಗಿರುವ ಚಿತ್ರದುರ್ಗ ಮತ್ತು ಹುಬ್ಬಳ್ಳಿ ಬಳಿಯೇ ತಡೆಯಬೇಕು. ಪರ್ಯಾಯ ರಸ್ತೆಯಾದ ಹೊಸಪೇಟೆ-ವಿಜಯಪುರ ಮತ್ತು ಹುಬ್ಬಳ್ಳಿ-ವಿಜಯಪುರ ಮೂಲಕ ಸಂಚರಿಸಲು ವಾಹನ ಸವಾರರಿಗೆ ಸೂಚಿಸುವಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ನಿಪ್ಪಾಣಿ ಬಳಿಯ ಯಮಗರ್ಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ಪುಣೆ- ಬೆಂಗಳೂರು ನಡುವಿನ ಸಂಚಾರ ಸ್ಥಗಿತಗೊಂಡಿದೆ. ಜಲಾವೃತಗೊಂಡ ರಾಷ್ಟ್ರೀಯ ಹೆದ್ದಾರಿಯ 2 ಕಿ.ಮೀ. ಮೊದಲೇ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ತಡೆ ಹಿಡಿಯಲಾಗಿದೆ.
ಧಾರವಾಡ ಕಡೆಯಿಂದ ಮಹಾರಾಷ್ಟ್ರಕ್ಕೆ ಹೊರಟಿರುವ ವಾಹನಗಳನ್ನು ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ತಡೆದು ಸವಾರರಿಗೆ ಮಾಹಿತಿ ನೀಡಲಾಗುತ್ತಿದೆ. ಜತೆಗೆ ಹತ್ತರಗಿ ಟೋಲ್ ನಾಕಾಬಳಿಯೂ ವಾಹನಗಳನ್ನೂ ನಿಲ್ಲಿಸಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ತಡೆದು ವಾಪಸ್ ಕಳುಹಿಸುವ ಕಾರ್ಯ ನಿಪ್ಪಾಣಿ ಪೊಲೀಸರು ಮಾಡುತ್ತಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.