ಬೆಂಗಳೂರು: ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಗುರುವಾರ ರೆಡ್ ಅಲರ್ಟ್ ಘೋಷಿಸಿದೆ.
ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಪಶ್ಚಿಮಘಟ್ಟ, ಕೊಡಗು, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಬುಧವಾರ ರಾತ್ರಿ ಐಎಂಡಿ ಬಿಡುಗಡೆ ಮಾಡಿರುವ ಹವಾಮಾನ ಬುಲೆಟಿನ್ ನಲ್ಲಿ ತಿಳಿಸಿತ್ತು.
ಭಾರೀ ಮಳೆ, ಭೂಕುಸಿತ, ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಶನಿವಾರದವರೆಗೆ ರಜೆ ಘೋಷಿಸಲಾಗಿತ್ತು. ದಕ್ಷಿಣ ಪ್ರದೇಶದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ರಾಜ್ಯದ 22 ಜಿಲ್ಲೆಗಳು ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿದ್ದು ಒಟ್ಟು ಮಳೆ ಸಂಬಂಧಿ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿದ್ದು, 15 ಮಂದಿ ನಾಪತ್ತೆಯಾಗಿದ್ದಾರೆ. ಏಳು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 51,460 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಭಾರೀ ಮಳೆಯಿಂದಾಗಿ ಭಾಗಶಃ ಮನೆ ಕುಸಿದ, ಮನೆ ಕಳೆದುಕೊಂಡ ಸುಮಾರು 3.7ಲಕ್ಷ ಮಂದಿ 1096 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.