ಹೈದರಾಬಾದ್: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತೆಲಂಗಾಣ ತತ್ತರಿಸಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್, ಮೇಲ್ಚಡ್ ಮಲ್ಕಾಜರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ.
ಧಾರಾಕಾರ ಮಳೆಯಿಂದಾಗಿ ಚರಂಡಿ ನೀರು ರಸ್ತೆಗೆ ನುಗ್ಗಿ ಇಬ್ಬರು ಕೊಚ್ಚಿಹೋಗಿದ್ದಾರೆ ಎಂದು ಎಸಿಪಿ ಕೆ. ಪುರುಷೋತ್ತಮ್ ಅವರು ಎಎನ್‍ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರಿ ಮಳೆಯಿಂದ ಜನಜೀವನ ಅಸ್ಥವ್ಯಸ್ಥವಾಗಿದೆ. ನಿರಂತರ ಮಳೆಯಿಂದಾಗಿ, ರಸ್ತೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಹಲವು ಅಡಿಗಳಷ್ಟು ನೀರು ನಿಂತಿದೆ. ನಿನ್ನೆ ರಾತ್ರಿ ಹಳೆ ಪಟ್ಟಣದಲ್ಲಿ ಟೆಂಪೋ ಕೊಚ್ಚಿಹೋದ ವಿಡಿಯೋ ಒಂದನ್ನು ಎಎನ್‍ಐ ಹಂಚಿಕೊಂಡಿದೆ.
Related Articles
ಮಳೆಯ ನೀರುಗಳು ರಸ್ತೆಗಳಲ್ಲಿ ನಿಂತುಕೊಂಡಿದ್ದು ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ. ಪಾದಚಾರಿಗಳು ನೀರು ನಿಂತ ರಸ್ತೆಗಳಲ್ಲಿ ನಡೆದು ಹೋಗುತ್ತಿರುವ ದೃಶ್ಯ ವನಸ್ಥಲಿಪುರಂನಲ್ಲಿ ಕಂಡುಬಂದಿತು.
ಹೈದರಾಬಾದ್ ಮಹಾನಗರ ಪಾಲಿಕೆ, ರಂಗರೆಡ್ಡಿ, ಮೇಲ್ಚಡ್ ಮಲ್ಕಾಜರಿ, ಅಮೀರ್ ಪೇಟೆ, ಸೋಮಾಜಿ ಗುಡ್ಡ, ಬಂಜಾರ ಬೆಟ್ಟ ಮತ್ತು ಜುಬಿಲಿ ಬೆಟ್ಟ, ಅಂಬೇರ್ ಪೇಟ್, ನಾಂಪಲ್ಲಿ, ಹಳೆ ಮಾಲಕ್‍ಪೇಟೆ, ಯಾಕುತ್‍ಪುರ, ಎಲ್‍ಬಿ ನಗರ, ಮತ್ತು ವನಸ್ಥಲಿಪುರಂ ಮುಂತಾದ ಕಡೆಗಳಲ್ಲಿ ಭಾರಿ ಮಳೆಯಾಗಿದೆ.
ಶನಿವಾರ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದ್ದು, ಜನರು ಮನೆಯೊಳಗೆ ಇರುವಂತೆ ನಗರದ ಮೇಯರ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಂಕಣ ತೀರ, ಗೋವಾ, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.