Advertisement

ಮಲೆನಾಡಲ್ಲಿ ಜನಜೀವನ ಅಸ್ತವ್ಯಸ್ತ

06:25 AM Aug 14, 2018 | Team Udayavani |

ಬೆಂಗಳೂರು/ಮಂಗಳೂರು: ಮಲೆನಾಡು ಭಾಗದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿ ಭಾಗದಲ್ಲೂ ಹಲವೆಡೆ ಮಳೆಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆ ಸಮೀಪದ ಮದೆನಾಡುವಿನ ಕರ್ತೋಜಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಗುಡ್ಡ ಕುಸಿದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಪರಿಣಾಮ ಮಡಿಕೇರಿ ಮೂಲಕ ಮೈಸೂರು ಸಂರ್ಪಕಿಸುವ ವಾಹನಗಳು ಸುಳ್ಯ -ಸುಬ್ರಹ್ಮಣ್ಯ- ಗುಂಡ್ಯ -ಸಕಲೇಶಪುರ ಮೂಲಕ ಸಾಗುತ್ತಿವೆ. ಸುಳ್ಯ ಮತ್ತು ಮಂಗಳೂರಿಗೆ ಬರುವ ವಾಹನಗಳು ಇದೇ ರಸ್ತೆಯಲ್ಲಿ ಬರಬೇಕಾದ ಪರಿಸ್ಥಿತಿ ತಲೆದೋರಿದೆ. ಮಡಿಕೇರಿ, ಸಂಪಾಜೆ ಆಸುಪಾಸಿನ ಜನರು ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬಂದು ಹೋಗಬೇಕಾಗಿದ್ದು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಸಕಲೇಶಪುರದಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ನಿಷೇಧಿಸಲಾಗಿದೆತಿಂಗಳಿನಿಂದಲೂ ದೊಡ್ಡತಪ್ಪಲು ಸಮೀಪ ಭೂಕುಸಿತ ಸಂಭವಿಸುತ್ತಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಅಧಿಕ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದರಿಂದ ಭಾರೀ ಪ್ರಮಾಣದ ಮಣ್ಣು, ಕಲ್ಲು, ಕಾಫಿಗಿಡ, ಮರಗಳು ಸುಮಾರು 100 ಮೀಟರ್‌ ದೂರದವರೆಗಿನ ಹೆದ್ದಾರಿಯಲ್ಲಿ ಹರಡಿದ್ದು, ನಾಲ್ಕು ಜೆಸಿಬಿ, ಒಂದು ಹಿಟಾಚಿ ಯಂತ್ರ ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ. ಆದರೂ ಭೂಕುಸಿತವಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಟ್ರಾಫಿಕ್‌ ಜಾಮ್‌: ಭೂಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ  ವಾಹನಗಳು ಕಿ.ಮೀ. ದೂರದವರೆಗೆ ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಅಧಿಕ ಮಳೆಯಿಂದಾಗಿ ವಾಹನದಿಂದ ಕೆಳಗೆ ಇಳಿಯುವುದು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸಂಜೆಯ ವೇಳೆಗೆ ಮತ್ತೆರಡು ಜೆಸಿಬಿಗಳನ್ನು ತರಿಸಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಯಿತು.  ಬಾಳ್ಳುಪೇಟೆಯಲ್ಲಿ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಬೆಂಗಳೂರಿನಿಂದ ಬರುವ ವಾಹನಗಳನ್ನು ಚಾರ್ಮಾಡಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.

ತುಂಗಾ ನದಿಯಲ್ಲಿ ಪ್ರವಾಹ
ತುಂಗಾ ನದಿಯಲ್ಲಿ 2 ನೇ ಬಾರಿಗೆ ಪ್ರವಾಹ ಉಂಟಾಗಿದೆ. ತುಂಗಾ ನದಿ ಜಲಾನಯನ ಪ್ರದೇಶವಾದ ಕೆರೆಕಟ್ಟೆ, ನೆಮ್ಮಾರ್‌, ಬುಕುಡಿಬೈಲು, ವಳಲೆ, ಮಾವಿನಕಾಡು, ಹೆಮ್ಮಿಗೆ, ಹಾಲ್ಮಕ್ಕಿ, ಹಜರತ್‌, ಕಿಗ್ಗಾ, ಸಿರಿಮನೆ ಮುಂತಾದೆಡೆ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ತುಂಗಾ ನದಿ ನೀರು ಪಟ್ಟಣದ ಬೈಪಾಸ್‌ ರಸ್ತೆ, ಕೆವಿಆರ್‌ ರಸ್ತೆ ಸೇರಿ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಪಟ್ಟಣದ ಹೊರವಲಯದ ವಿದ್ಯಾರಣ್ಯಪುರಕ್ಕೆ ಸಂಪರ್ಕಿಸುವ ರಸ್ತೆ ಸಂಚಾರ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 169 ರ ತನಿಕೋಡು ಬಳಿ ರಸ್ತೆ ಮೇಲೆಯೇ ನೀರು ಹರಿಯುತ್ತಿದೆ.

Advertisement

ಚಿಕ್ಕೋಡಿಯಲ್ಲಿ ಸೇತುವೆ ಜಲಾವೃತ
ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ಗಡಿ ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಗಡಿ ಭಾಗದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಇದರಿಂದ ಚಿಕ್ಕೋಡಿ ತಾಲೂಕಿನ 2  ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಕಲ್ಲೋಳ-ಯಡೂರ ಸೇತುವೆ ಮೂರನೆ ಬಾರಿಗೆ ಜಲಾವೃತಗೊಂಡರೆ ದೂಧಗಂಗಾ ನದಿಗೆ  ಕಟ್ಟಿರುವ ಮಲಿಕವಾಡ-ದತ್ತವಾಡ ಸೇತುವೆ 2ನೇ ಬಾರಿ ಮುಳುಗಡೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟಿನ ಜಲಮಟ್ಟ 1812.75 ಅಡಿಗೆ ತಲುಪಿದೆ.

3  ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸಾಧ್ಯತೆ
ರಾಜ್ಯದ ಕರಾವಳಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದ್ದರಿಂದ ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ ಮಳೆ ಆರ್ಭಟಿಸಲಿದೆ.  ನೆರೆಯ ಕೇರಳದಲ್ಲಿ ಮಳೆ ಅಬ್ಬರಿಸಿದ ಬೆನ್ನಲ್ಲೇ ರಾಜ್ಯದಲ್ಲೂ  ಚುರುಕುಗೊಂಡಿದೆ. ಸಮುದ್ರ ಮಟ್ಟದಿಂದ 7.6 ಕಿ.ಮೀ. ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಂಡುಬಂದಿದ್ದು, ಇದರಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಮೂರೂ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬೀಳುವ ಸಾಧ್ಯತೆ ಇದೆ. ಅದೇ ರೀತಿ, ದಕ್ಷಿಣ ಒಳನಾಡು ಅದರಲ್ಲೂ ಘಟ್ಟಪ್ರದೇಶಗಳಲ್ಲಿ ಕೂಡ ಭಾರಿ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಉತ್ತರ ಒಳನಾಡಿನ ಮಳೆ ಅಬ್ಬರ ಕಡಿಮೆ ಇದೆ. ಆ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next