ವಿಜಯಪುರ : ಭೀಕರ ಬರದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆ ಸುರಿದಿದೆ. ಇದರಿಂದಾಗಿ ಅಲ್ಲಲ್ಲಿ ಬೆಳೆದ ಬೆಳೆಯೂ ಹಾನಿಗೀಡಾಗಿದ್ದು, ಜಿಲ್ಲೆಯ ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವು ಕಡೆಗಳಲ್ಲಿ ತುಂತುರು ಮಳೆ ಸುರಿದಿತ್ತು. ಆದರೆ ಗುರುವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ವಿಜಯಪುರ, ತಿಕೋಟ ಭಾಗದಲ್ಲಿ ಸುಮಾರು ಒಂದೆರಡು ಗಂಟೆಗೂ ಹೆಚ್ಚು ನಿರಂತರ ಸುರಿದ ಮಳೆ ಬಿಸಿಲಿಇಂದ ಕಂಗೆಟ್ಟಿದ್ದ ಇಳೆಯನ್ನು ತಂದು ಮಾಡಿದೆ.
ಉಳಿದಂತೆ ಬಸವನಬಾಗೇವಾಡಿ, ಇಂಡಿ, ಆಲಮೇಲ್, ಚಡಚಣ, ದೇವರಹಿಪ್ಪರಗಿ, ಬಬಲೇಶ್ವರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಲಘು ಪ್ರಮಾಣದ ಮಳೆಯಾಗಿದೆ. ತಿಕೋಟಾ ಭಾಗದಲ್ಲಿ ಅಲ್ಪ ಸ್ವಲ್ಪ ಸುರಿದ ಮಳೆಗೆ ಬಿತ್ತನೆ ಮಾಡಿ, ಬೆಳೆದು ನಿಂತಿದ್ದ ಬಿಳಿಜೋಳ, ಮೆಕ್ಕೆಜೋಳ, ತೊಗರಿ ಸೇರಿದಂತೆ ಇತರೆ ಬೆಳೆಗಳು ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ನೆಲಕಚ್ಚಿವೆ.
ತಿಕೋಟಾ ಭಾಗದ ಹಲವು ರೈತರ ದ್ರಾಕ್ಷಿ ತೋಟಗಳಲ್ಲಿ ಬಹುತೇಕ ಕಟೆಗಳಲ್ಲಿ ಚಾಟ್ನಿ ಮಾಡಿದ್ದು, ಹೂವು ಬಿಡುತ್ತಿದ್ದ ಈ ಹಂತದಲ್ಲಿ ಸುರಿದ ಮಳೆಗೆ ದ್ರಾಕ್ಷಿ ಬೆಳೆಯೂ ಹಾನಿಯಾಗಿದೆ.
ಮುದ್ದೇಬಿಹಾಳ ತಾಲೂಕಿನ ಕೆಲವೆಡೆಬೊಣಗಲು ಹಾಕಿದ್ದ ಈರುಳ್ಳಿ ಬೆಳೆಗೆ ಮಳೆಯಿಂದ ಹಾನಿಯಾಗಿದೆ. ಕೆಲವು ಕಡೆಗಳಲ್ಲಿ ದ್ರಾಕ್ಷಿಯ ಕಂಬಗಳು ಬಾಗಿದ್ದು, ನೆಲಕ್ಕೆ ಉರುಳುವ ದುಸ್ಥಿತಿಯಲ್ಲಿವೆ.
ಹಿಂಗಾರು ಹಂಗಾಮಿನ ಕೊನೆಯಲ್ಲಿ ಸುರಿದ ಒಂದೇ ಮಳೆಗೆ ಜಿಲ್ಲೆಯಲ್ಲಿ ಬೆಳೆದು ನಿಂತಿದ್ದ ಅಲ್ಪಸ್ವಲ್ಪ ಬೆಳೆಯೂ ಹಾನಿಗೀಡಾಗಿದ್ದು, ರೈತರನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ.