Advertisement

ಕಾಫಿ ನಾಡಲ್ಲಿ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ

06:13 PM Jul 05, 2022 | Team Udayavani |

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜಿಲ್ಲಾದ್ಯಂತ ಭಾನುವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿದ್ದು, ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮುಳುಗಡೆಯಾಗಿದೆ.

Advertisement

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ ನಿರಂತರವಾಗಿ ಮಳೆಯಿಂದ ಜನಜೀವನ ಅಸ್ತ ವ್ಯಸ್ತವಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ ಭದ್ರಾ, ತುಂಗಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಭದ್ರಾ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳಸ ಪಟ್ಟಣ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಸಂಪರ್ಕದ ಹೆಬ್ಟಾಳೆ ಸೇತುವೆ ಭಾಗಶಃ ಭದ್ರಾ ನದಿಯ ನೀರಿನಲ್ಲಿ ಮುಳುಗಡೆಯಾಗಿದೆ. ಸೋಮವಾರ ಮುಂಜಾನೆ ವೇಳೆಯಲ್ಲಿ ಹೆಬ್ಟಾಳೆ ಸೇತುವೆ ಮೇಲೆ 1 ಅಡಿಯಷ್ಟು ನೀರು ಹರಿದಿದ್ದು, ನದಿಯಲ್ಲಿ ತೇಲಿ ಬಂದ ಬೃಹತ್‌ ಗಾತ್ರದ ಮರವೊಂದು ಸೇತುವೆ ಮಧ್ಯೆ ಸಿಲುಕಿಕೊಂಡಿದ್ದ ಪರಿಣಾಮ ಸೇತುವೆ ಮೇಲೆ ವಾಹನ ಸಂಚಾರ ಸಾಧ್ಯವಾಗದೆ ಸೇತುವೆಯ ಎರಡೂ ಬದಿಗಳಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು. ಸೇತುವೆ ಮುಳುಗಡೆಯಾದ ದೃಶ್ಯ ನೋಡಲು ಸ್ಥಳೀಯರು ನದಿ ತೀರದಲ್ಲಿ ನೆರೆದಿದ್ದರು.

ಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕಳಸ- ಬಾಳೆಹೊನ್ನೂರು ಸಂಪರ್ಕದ ರಾಜ್ಯ ಹೆದ್ದಾರಿ ಸಮೀಪಕ್ಕೆ ನದಿ ನೀರು ತಲುಪಿದ್ದು, ಮಳೆ ಆರ್ಭಟ ಮುಂದುವರಿದಲ್ಲಿ ಕಳಸ ಬಾಳೆಹೊನ್ನೂರು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಭದ್ರಾ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾತ್ರದ ಗ್ರಾಮಗಳಾದ ಕಗ್ಗನಳ್ಳ, ಬಾಳೆಹೊಳೆ, ಮಾಗುಂಡಿ ಹಾಗೂ ಬಾಳೆಹೊನ್ನೂರು ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ.

ನದಿ ಪಾತ್ರದಲ್ಲಿರುವ ಕಾಫಿ, ಅಡಕೆ ತೋಟಗಳಿಗೆ ನದಿ ನೀರು ನುಗ್ಗಿ ಜಲಾವೃತಗೊಂಡಿದೆ. ತುಂಗಾ ನದಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಹರಿಯುವ ಹೇಮಾವತಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಅಕ್ಕಪಕ್ಕದ ಅಡಕೆ ತೋಟಗಳು, ಭತ್ತದ ಗದ್ದೆಗಳಿಗೆ ನದಿ ನೀರು ನುಗ್ಗುವ ಆತಂಕ ಎದುರಾಗಿದೆ. ಮಲೆನಾಡು ಭಾಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಮಲೆನಾಡು ಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ.

Advertisement

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಇಡೀ ದಿನ ಸಾಧಾರಣ ಮಳೆಯಾಗುತ್ತಿದ್ದರೆ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿ ಪಾತಿಗುಡ್ಡ ಎಂಬಲ್ಲಿ ಸೆಲ್ವಿ ಎಂಬುವವರ ಮನೆ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಅವರು ವಾಸಿಸುತ್ತಿದ್ದ ಮನೆ ಭಾಗಶಃ ಜಖಂಗೊಂಡಿದೆ.

ಶೃಂಗೇರಿ- ಚಿಕ್ಕಮಗಳೂರು ಹೆದ್ದಾರಿಯಲ್ಲಿರುವ ಕೊಡಿಗೆ ಮಕ್ಕಿ ಎಂಬಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಮೇಲೆ ಮಣ್ಣು ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಮಲೆನಾಡು ಭಾಗದಲ್ಲಿ 8ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಎಡೆಬಿಡದೆಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಮೂಡಿಗೆರೆ, ಶೃಂಗೇರಿ ಮತ್ತು ಕಳಸ ತಾಲೂಕಿನ ಎಲ್ಲಾ ಶಾಲೆಗಳಿಗೆ ಜು. 5 ಮತ್ತು 6ರಂದು ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.