ಹುಬ್ಬಳ್ಳಿ/ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ರಾಯಚೂರಿನಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 11ಸೆಂ.ಮೀ. ಮಳೆಯಾಗಿದೆ. ಮಲೆನಾಡು ಭಾಗಗಳಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಬುಧವಾರ ಪುನಃ ಸುರಿಯಲಾರಂಭಿಸಿದೆ. ರಾಯಚೂರು ಜಿಲ್ಲೆಯ ಜನರಿಗೆ ಮಂಗಳವಾರ ರಾತ್ರಿ ಎಡಬಿಡದೆ ಸುರಿದ ಮಳೆ ಆತಂಕ ತಂದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.
ನಗರದ ಎನ್‌ಜಿಒ ಕಾಲೋನಿಯಲ್ಲಿ ದೇವಸ್ಥಾನದ ಅರ್ಚಕ ಶಂಕರಲಿಂಗ ಎಂಬುವರ ಮನೆ ಗೋಡೆ ಕುಸಿದಿದ್ದು, ಚಿಕ್ಕ ಮಗು ಸೇರಿ ಮನೆಯವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹರಿಜನವಾಡ, ಸಿಯಾತಲಾಬ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಇಡೀ ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದಾರೆ. ನೀರಿನಲ್ಲಿ ತೇಲಿ ಹೋಗುತ್ತಿದ್ದ ಸಾಮಗ್ರಿಗಳನ್ನು ಪಾತ್ರೆ- ಪಗಡೆ ಗಳನ್ನು ಹಿಡಿದಿಡಲು ಜನ ಹರಸಾಹಸಪಡಬೇಕಾಯಿತು.
ಗ್ರಾಮೀಣ ಭಾಗದಲ್ಲೂ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಸಂಚಾರ ಸ್ಥಗಿತಗೊಂಡಿದೆ. ಜೇಗರಕಲ್ ಹಳ್ಳ ಭರ್ತಿಯಾದ ಪರಿಣಾಮ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಹತ್ತಿ, ತೊಗರಿ, ಸೂರ್ಯಕಾಂತಿ ಸೇರಿ ಇನ್ನಿತರ ಬೆಳೆಗಳಿಗೆ ಧಕ್ಕೆಯಾಗಿದೆ. ನಗರದ ಇಎಸ್‌ಐಸಿ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳು ಪರದಾಡುವಂತಾಗಿದೆ. ಈಗಷ್ಟೇ ತೊಗರಿ, ಹತ್ತಿ ಬೆಳೆ ಚೇತರಿಸಿಕೊಳ್ಳುತ್ತಿದ್ದು, ಮಳೆ ಇದೇ ರೀತಿ ಸುರಿದಲ್ಲಿ ಬೆಳೆ ಕೊಳೆತು ಹಾಳಾಗುವ ಸಾಧ್ಯತೆಗಳಿವೆ.
ಮಲೆನಾಡಲ್ಲಿ ವರುಣನ ಸಿಂಚನ: ಮಲೆನಾಡು ಭಾಗಗಳಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಬುಧವಾರ ಪುನಃ ಸುರಿಯಲಾರಂಭಿಸಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಬುಧವಾರ ಮಧ್ಯಾಹ್ನ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಶೃಂಗೇರಿ ತಾಲೂಕಿನಲ್ಲಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಸಂಜೆಯಾದರೂ ಮಳೆ ಪ್ರಮಾಣ ಕಡಿಮೆಯಾಗಿಲ್ಲ.
ಕೊಪ್ಪ ತಾಲೂಕಿನ ವಿವಿಧೆಡೆ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲೂ ಮಧ್ಯಾಹ್ನದ ನಂತರ ಭಾರೀ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕಳಸ, ಹೊರನಾಡು, ಕೊಟ್ಟಿಗೆಹಾರ ಭಾಗಗಳಲ್ಲಿ ಬುಧವಾರ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಹಾಗೂ ಕಡೂರು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ ಮತ್ತು ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೆರೆ: ಚಾರ್ಮಾಡಿ ಪ್ರದೇಶದ ಮೃತ್ಯುಂಜಯ ನದಿಯಲ್ಲಿ ಬುಧವಾರ ಸಂಜೆ ಏಕಾಏಕಿ ನೆರೆ ನೀರು ಉಕ್ಕಿ ಹರಿದು ತಟದ ತೋಟಗಳಿಗೆ ನುಗ್ಗಿದೆ. ಆ.9ರ ನೆರೆಯಿಂದ ಸಂತ್ರಸ್ತರಾದವರು ಇನ್ನೇನು ಬದುಕು ಕಟ್ಟಿಕೊಳ್ಳುವಷ್ಟರಲ್ಲೇ ಮತ್ತೆ ನದಿ ಉಕ್ಕಿ ಹರಿದಿರುವುದು ಆತಂಕ ಮೂಡಿಸಿದೆ. ಪಶ್ಚಿಮ ಘಟ್ಟ ಮೇಲ್ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮವಿದು ಎನ್ನಲಾಗಿದೆ. ಚಾರ್ಮಾಡಿ ಗ್ರಾಮದ ಅರಣೆಪಾದೆ -ಅಂತರ ಸಂಪರ್ಕ ಸತತ ನಾಲ್ಕನೇ ಬಾರಿಗೆ ಕಡಿತಗೊಂಡಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದ್ದರಿಂದ ಪ್ರವಾಹದ ಬಳಿಕ ಕೈಗೊಂಡಿದ್ದ ಶ್ರಮದಾನ ನೀರು ಪಾಲಾಗಿದೆ.