ಮೈಸೂರು: ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ 2 ಅಡಿಯಷ್ಟು ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ಮುಂಗಾರು ಮಳೆ ಚುರುಕುಗೊಂಡಿದ್ದು, ಭಾನುವಾರ ನಗರದ ಹಲವೆಡೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿರು ಬಿಸಿಲೇ ಇತ್ತಾದರೂ, ಮಧ್ಯಾಹ್ನ 3.45 ಗಂಟೆಯಾಗುತ್ತಿದ್ದಂತೆ ಸುತ್ತಲೂ ಕಾರ್ಮೋಡ ಕವಿಯಿತು. ಬಳಿಕ ಕೊಂಚ ಗಾಳಿ ಶುರುವಾಯಿತು. ಅದರ ಜತೆಯಲ್ಲೇ ಮಳೆಯೂ ಆರಂಭ ವಾಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಕೆಲ ನಿಮಿಷ ವಿರಾಮ ನೀಡಿದ್ದ ಮಳೆ ಮತ್ತೆ ಗುಡುಗು, ಮಿಂಚಿನೊಂದಿಗೆ ಆಗಮಿಸಿ ಮತ್ತಷ್ಟು ಹೊತ್ತು ಧಾರಾಕಾರವಾಗಿ ಸುರಿಯಿತು.
ತಗ್ಗು ಪ್ರದೇಶಕ್ಕೆ ನೀರು: ಜೋರು ಮಳೆ ಸುರಿದ ಕಾರಣ ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ಇದರಿಂದ ಅನೇಕ ರಸ್ತೆಗಳು, ಮೋರಿ, ಒಳಚರಂಡಿ ಹಾಗೂ ಮ್ಯಾನ್‌ಹೋಲ್‌ಗಳಲ್ಲಿ ನೀರು ಉಕ್ಕಿ ಹರಿಯಿತು. ನಗರದ ಪ್ರಮುಖ ರಸ್ತೆಗಳಲ್ಲಿ 2 ಅಡಿ ಯಷ್ಟು ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ರಸ್ತೆಯಲ್ಲಿ ಹೆಚ್ಚು ನೀರು ಹರಿದ ಪರಿಣಾಮ ಕೆಲ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತು. ದ್ವಿಚಕ್ರ ವಾಹನ ಸವಾರರು ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದರು.
ವಾಹನ ಸಂಚಾರಕ್ಕೆ ಅಡ್ಡಿ: ಬಲ್ಲಾಳ್ ವೃತ್ತ, ನಂಜಗೂಡು-ಮೈಸೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಕೆ.ಆರ್. ವೃತ್ತ, ಅಶೋಕ ರಸ್ತೆ ದೊಡ್ಡ ಗಡಿಯಾರ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತ ಕಾರಣ ವಾಹನ ಸಂಚಾರಕ್ಕೆ ತೊಡಕಾಗಿದೆ. ಈ ವೇಳೆ ಕೆಲ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದ ಘಟನೆಗಳು ನಡೆದವು. ಕೆ.ಆರ್. ವೃತ್ತ, ಚಾಮರಾಜ ವೃತ್ತ, ದೊಡ್ಡಗಡಿಯಾರ ಸುತ್ತಮುತ್ತ ಮಳೆ ನೀರು ರಸ್ತೆ ಮಧ್ಯೆ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಕೆಳ ಕಾಲ ಅಡಚಣೆಯಾಯಿತು. ಇಲ್ಲಿಯ ರಸ್ತೆಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕೆಲ ಸಮಯ ಮುಳುಗಡೆಯಾದವು.
ಚರಂಡಿ ಉಕ್ಕಿ ಹರಿದ ಪರಿಣಾಮ ಎಲೆತೋಟ, ಕನಕಗಿರಿ ರಸ್ತ ಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು. ಉಯಗಿರಿ, ಮಂಡಿಮೊಹಲ್ಲಾ, ವಿಜಯನಗರ, ರಾಮಕೃಷ್ಣ ನಗರ, ಶಾರದಾದೇವಿನಗರ, ಜೆ.ಪಿ.ನಗರ, ವಿದ್ಯಾರಣ್ಯ ಪುರಂ, ರಾಮಸ್ವಾಮಿ ವೃತ್ತ, ಲಕ್ಷ್ಮೀಪುರಂ, ಟಿ.ಕೆ.ಬಡಾವಣೆಯಲ್ಲಿ, ಬೋಗಾದಿಯಲ್ಲಿ, ನಿರ್ಮಿತಿ ಕೇಂದ್ರ ರಸ್ತೆ, ಕುವೆಂಪು ನಗರ, ಹುಣಸೂರು ರಸ್ತೆ, ಜಯನಗರ, ಕಾಳಿದಾಸ ರಸ್ತೆ, ಚಾಮರಾಜಪುರಂ ರೈಲ್ವೆ ನಿಲ್ದಾಣ, ಸಾರ್ವಜನಿಕರ ಹಾಸ್ಟೆಲ್ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ಇನ್ನೂ ಕೆಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದವಾದರೂ, ಯಾವುದೇ ಅನಾಹುತ ಸಂಬಭವಿಸಿಲ್ಲ.