ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರೆದಿದ್ದು ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗುತ್ತಿದೆ.
ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 1.19.775 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಹೀಗಾಗಿ ಮತ್ತೊಮ್ಮೆ ನದಿ ತೀರದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶದ ಹೆಚ್ಚು ಮಳೆ ಬೀಳುವ ಕೋಯ್ನಾ, ಮಹಾಬಲೇಶ್ವರ, ನವಜಾ, ಪಾಟಗಾಂವ, ಕಾಳಮ್ಮವಾಡಿ ಮತ್ತು ಕೊಲ್ಲಾಪೂರ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.
ದೂಧಗಂಗಾ ಮತ್ತು ವೇದಗಂಗಾ ನದಿಗಳ ಪ್ರವಾಹದಿಂದ ಈಗಾಗಲೇ ಆರಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರ ಕಡಿತಗೊಂಡಿದ್ದು, ಪ್ರಯಾಣಿಕರು ಸುತ್ತು ಬಳಸಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ.
ಬೆಳಿಗ್ಗೆ ಎಂಟು ಗಂಟೆಗೆ ದಾಖಲಾದ ಮಾಹಿತಿಯಂತೆ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 93 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಅದೇ ರೀತಿ ದೂಧಗಂಗಾ ನದಿಯಿಂದ 26400 ಕ್ಯೂಸೆಕ್ ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.19.775 ಕ್ಯೂಸೆಕ್ಸ್ ನೀರು ಬರುತ್ತಿದೆ. ಆದರೆ ಹಿಪ್ಪರಗಿ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ 1.13 ಸಾವಿರ ನೀರನ್ನು ಬಿಡುತ್ತಿರುವದರಿಂದ ಹೋಗುತ್ತಿದೆ ಎಂದು ಸಧ್ಯ ಪ್ರವಾಹದ ಭೀತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿದ ನೆತ್ತರು: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ
ಇನ್ನೊಂದು ಕಡೆ ಅಂಬೋಲಿ ಘಟ್ಟ ಪ್ರದೇಶದಲ್ಲಿ ಸಹ ವ್ಯಾಪಕವಾಗಿ ಮಳೆಯಾಗುತ್ತಿದ್ದು ಘಟಪ್ರಭಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಯಥಾಸ್ಥಿತಿ ಇದೆ. ಇದರಿಂದ ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಮೂರು ಅಡಿಗಳಷ್ಟು ಏರಿಕೆಯಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2127 ಅಡಿ ನೀರು ಸಂಗ್ರಹವಾಗಿದೆ.
ಅದೇರೀತಿ ಖಾನಾಪುರ ತಾಲೂಕಿನಲ್ಲಿ ಸಹ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ 12 ಸಾವಿರ ಕ್ಯೂಸೆಕ್ಸ್ ಬರುತ್ತಿದೆ. ಅರಣ್ಯ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು ಹೆಮ್ಮಡಗಾ ಬಳಿ ರಸ್ತೆಯ ಮೇಲೆ ನೀರು ಬರುತ್ತಿದ್ದು ಸಂಚಾರ ಕಡಿತಗೊಂಡಿದೆ.