Advertisement

ಕುಂದಾಪುರ, ಬೈಂದೂರು ತಾ|ಗಳಲ್ಲಿ ಭಾರೀ ಮಳೆ: ಹಲವೆಡೆ ನೆರೆ

01:42 AM Aug 07, 2019 | sudhir |

ಕುಂದಾಪುರ: ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಎಡೆಬಿಡದೆ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಭೀತಿ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.

Advertisement

ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ತಲ್ಲೂರು, ಹೆಮ್ಮಾಡಿ, ಬಿದ್ಕಲ್ಕಟ್ಟೆ, ಹಾಲಾಡಿ, ಮೊಳಹಳ್ಳಿ, ಹುಣ್ಸೆಮಕ್ಕಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ, ಕೊಲ್ಲೂರು, ವಂಡ್ಸೆ, ಜಡ್ಕಲ್, ನೇರಳಕಟ್ಟೆ, ಅಂಪಾರು, ಕೆರಾಡಿ, ಗುಲ್ವಾಡಿ, ಸೌಕೂರು, ಬೈಂದೂರು, ಉಪ್ಪುಂದ, ಮರವಂತೆ, ಗಂಗೊಳ್ಳಿ, ಗೋಳಿಹೊಳೆ ಸಹಿತ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದಲೇ ನಿರಂತರ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಇದಲ್ಲದೆ ಕೆಲವೆಡೆಗಳಲ್ಲಿ ಬಾಳೆ ಗಿಡಗಳು, ರಬ್ಬರ್‌ ಮರಗಳು ಗಾಳಿಗೆ ಉರುಳಿ ಬಿದ್ದಿವೆ.

5 ಮನೆ ಜಲಾವೃತ

ಹೊಂಬಾಡಿ – ಮಂಡಾಡಿ ಗ್ರಾಮದ ಯಡಾಡಿ – ಮತ್ಯಾಡಿಯಲ್ಲಿ 5 ಮನೆಗಳಿಗೆ ನೀರು ನುಗ್ಗಿದೆ. ನಾಡ, ಗುಡ್ಡೆಯಂಗಡಿ, ಮರವಂತೆ, ಬಡಾಕೆರೆ ಭಾಗದಲ್ಲಿ ರಸ್ತೆಗಳು, ತೋಟ, ಗದ್ದೆಗಳು ಜಲಾವೃತಗೊಂಡಿವೆ. ಅಲ್ಲಿಗೆ ಪೊಲೀಸರು, ಸ್ಥಳೀಯ ಪಂಚಾಯತ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೆದೂರಿನ ರೈಲ್ವೆ ಹಳಿ ಮೇಲೆ ನೀರು ನಿಂತು ಕೆಲ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬೇಳೂರಿನಲ್ಲಿ ಮನೆ, ಅಂಗನವಾಡಿ ಅಂಗಳವಿಡೀ ನೀರು ತುಂಬಿ ತೊಂದರೆಯಾಗಿತ್ತು.

ತುಂಬಿ ಹರಿಯುತ್ತಿದೆ ನದಿಗಳು

Advertisement

ಕುಂದಾಪುರ, ಬೈಂದೂರು ಭಾಗದ ಸೌಪರ್ಣಿಕಾ, ಕುಬ್ಜಾ, ಚಕ್ರ, ಕೇತ, ವಾರಾಹಿ/ಹಾಲಾಡಿ, ಸುಮನಾವತಿ ಸಹಿತ ಎಲ್ಲ ನದಿಗಳು ತುಂಬಿ ಹರಿಯುತ್ತಿದೆ. ಕೆಲವು ಭಾಗಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ನದಿ ಪಾತ್ರಗಳಲ್ಲಿ ನೆಲೆಸಿರುವ ಜನ ಭಯಭೀತರಾಗಿದ್ದಾರೆ.

ಕಡಲಬ್ಬರ ಬಿರುಸು

ಕೋಡಿ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ, ಕೊಡೇರಿ, ಶಿರೂರು ಭಾಗಗಳಲ್ಲಿ ಅಲೆಗಳ ಅಬ್ಬರವೂ ಬಿರುಸಾಗಿದ್ದು, ತೀರದ ನಿವಾಸಿ ಗರನ್ನು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ತೆಕ್ಕಟ್ಟೆ: ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆದೂರು ರೈಲ್ವೇ ಟ್ರ್ಯಾಕ್‌ ಮೇಲೆ ಅಪಾರ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರಿನಿಂದ ಮುಂಬಯಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಬೆಳಗ್ಗೆ ಗಂಟೆ 10 ರಿಂದ 11 ಗಂಟೆಯ ವರೆಗೆ ಚಲಿಸದೆ ನಿಂತಿದ್ದು, ರೈಲು ಚಾಲಕ ರೈಲು ನಿಲ್ಲಿಸಿ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ಪ್ರಯಾಣಿಕರು ಮಾತ್ರ ಆಟೋ ಹಾಗೂ ಬಸ್‌ ಸಹಾಯದಿಂದ ಬೇರೆ ಕಡೆಗೆ ಪಯಣಸಿದ ದೃಶ್ಯ ಕೂಡಾ ಕಂಡು ಬಂದಿದೆ, ಇದೇ ಸಂದರ್ಭದಲ್ಲಿ ಸ್ಥಳೀಯ ಯುವಕರ ತಂಡ ರೈಲ್ವೆ ಟ್ರಾಕ್‌ ಬಳಿಗೆ ತೆರಳಿ ಸಹಕರಿಸಿದರು. ಕೆದೂರು ಗ್ರಾಮದ ಪ್ರಮುಖ ಭಾಗದಿಂದ ಹರಿದು ಬರುವ ಮಳೆ ನೀರು ನೇರವಾಗಿ ರೈಲ್ವೇ ಮಾರ್ಗದ ಮೇಲೆ ಬರುವ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನೂರಾರು ಮಂದಿ ಕಾತುರದಿಂದ ನೋಡುತ್ತಿರುವ ದೃಶ್ಯ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next