Advertisement

ಘಾಟಿ ಪ್ರದೇಶದಲ್ಲಿ ಭಾರೀ ಮಳೆ : ಎಳನೀರು ಸಂಪರ್ಕ ರಸ್ತೆಗೆ ಹಾನಿ

01:02 AM Nov 17, 2021 | Team Udayavani |

ಬೆಳ್ತಂಗಡಿ: ಚಿಕ್ಕಮಗಳೂರು ಆಸುಪಾಸು ಹಾಗೂ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು ಪರಿಸರದಲ್ಲಿ ಏಕಾಏಕಿ ನದಿ ಪಾತ್ರಗಳು ಉಕ್ಕಿ ಹರಿದಿವೆ.

Advertisement

ಸುಮಾರು 2 ಗಂಟೆಯಿಂದ ಭಾರೀ ಮಳೆಯಾದ ಪರಿಣಾಮ ರಾಷ್ಟ್ರೀಯ ಉದ್ಯಾನವನದಂಚಿನ ಬಂಡಾಜೆ ಅರ್ಬಿ ಫಾಲ್ಸ್‌ನಲ್ಲಿ ಮಣ್ಣು ಮಿಶ್ರಿತ ನೀರು ಧುಮ್ಮಿಕ್ಕಿ ಹರಿದಿದ್ದರಿಂದ ಗುಡ್ಡ ಪ್ರದೇಶ ಕುಸಿದಂತೆ ಭಾಸವಾಗಿತ್ತು. ಕೇವಲ ಅರ್ಧ ತಾಸಿನಲ್ಲಿ ಹರಿದ ನೀರಿನ ಪ್ರಮಾಣ ಸ್ಥಳೀಯರಿಗೆ 2019ರ ಪ್ರವಾಹವನ್ನು ನೆನಪಿಸಿತ್ತು.

ಭಾರೀ ಮಳೆಯ ಪರಿಣಾಮ ದಿಡುಪೆ ಪರಿಸರವಾಗಿ ಹರಿಯುವ ನಂದಿಕಾಡು ಹೊಳೆ, ಆನಡ್ಕ, ನೇತ್ರಾವತಿ ನದಿ, ಕರಿಯಂದೂರು ಹೊಳೆ, ಕುಕ್ಕಾವು ಹೊಳೆಗಳಲ್ಲಿ ನೀರು ಏಕಾಏಕಿ ಉಕ್ಕಿ ಹರಿದಿದ್ದು ಅಂಗಳದಲ್ಲಿ ರಾಶಿ ಹಾಕಿದ ಅಡಿಕೆಗಳುಕೊಚ್ಚಿಹೋಗಿವೆ. ತೋಟ, ಗದ್ದೆಗಳಿಗೂ ನೀರು ನುಗ್ಗಿತ್ತು. ಅಡಿಕೆ ಮರದ ಕಾಲುಸಂಕವೂ ಕೊಚ್ಚಿಹೋಗುವ ಮಟ್ಟಿಗೆ ನೀರು ಹೆಚ್ಚಿತ್ತು. ನೇತ್ರಾವತಿ ನದಿಯ ಕೊಪ್ಪದಗಂಡಿ ಕಿರುಸೇತುವೆ ಜಲಾವೃತವಾಗಿತ್ತು. ನೆರಿಯಾ ಪ್ರದೇಶಗಳಲ್ಲೂ ನಿರಂತರ ಮಳೆಯಾಗಿದೆ. ಆದರೆ ಬೆಳ್ತಂಗಡಿ ಇತರೆಡೆ ಭಾರೀ ಮಳೆ ಕಂಡುಬರಲಿಲ್ಲ.

ಧುಮ್ಮಿಕ್ಕಿದ ಬಂಡಾಜೆ ಜಲಪಾತ
ಬಂಟಾಜೆ ಜಲಪಾತ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿರುವ ಕಡಿರುದ್ಯಾವರ ದಿಂದ ಅಲ್ಲಿನ ಗ್ರಾ. ಪಂ. ಅಧ್ಯಕ್ಷ ಅಶೋಕ್‌ ಅವರು ಧುಮ್ಮಿಕ್ಕುವ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ದಿಡುಪೆ-ಎಳನೀರು ರಸ್ತೆ, ಕಾಫಿ ಕೃಷಿ ಹಾನಿ
ಮಳೆ ಪ್ರಮಾಣದಿಂದ ಮಲವಂತಿಗೆ ಗ್ರಾಮದಿಂದ ದಿಡುಪೆಯಾಗಿ-ಎಳನೀರು ಸಾಗುವ ಮಣ್ಣಿನ ರಸ್ತೆಗೆ ಹಾನಿಯಾಗಿದೆ. ಎಳನೀರು ಭಾಗದಲ್ಲಿ ಈ ವರ್ಷ ಎಲೆಚುಕ್ಕಿ ಹಾಗೂ ಮಳೆ ಪ್ರಮಾಣದಿಂದ ಅಡಿಕೆ ಕೃಷಿ ಹಾನಿಯಾದರೆ, ಮತ್ತೂಂದೆಡೆ ಕಾಫಿ ಹಣ್ಣಾಗಿ ಕೊಯ್ಯುವ ಸಮಯವಾಗಿದ್ದರೂ ಮಳೆಯಿಂದ ಕೊಯ್ಯಲೂ ಸಾಧ್ಯವಾಗದೆ, ಹಣ್ಣಾದ ಕಾಫಿ ಒಣಗಿಸಲು ಸಾಧ್ಯವಾಗಿಲ್ಲ. ಅತ್ತ ಭತ್ತ ಕೃಷಿಯೂ ನಾಶವಾಗಿದೆ.

Advertisement

ಇದನ್ನೂ ಓದಿ:ಭೂಮಿ ಮರಳಿಸಿ: ಅರಣ್ಯ ಇಲಾಖೆಗೆ ಸೂಚನೆ

ಮುಂದುವರಿಯುವ ಮಳೆ
ಉಡುಪಿ/ಮಂಗಳೂರು: ಕರಾವಳಿಯಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು ಕರಾವಳಿಯಲ್ಲಿ ನ.21ರ ವರೆಗೆ ಅಧಿಕ ಮಳೆ ಸುರಿಯುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳವಾರ ಮೋಡ ಬಿಸಿಲು ವಾತಾವರಣದೊಂದಿಗೆ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ಉಡುಪಿ ಜಿಲ್ಲೆಯ ವಿವಿಧ ಕಡೆ ಮಳೆಯಾಗಿದೆ.

ಉಡುಪಿ, ಮಲ್ಪೆ, ಮಣಿಪಾಲ ನಗರ ಸುತ್ತಮುತ್ತ ಬೆಳಗ್ಗೆಯಿಂದಲೂ ಜಿಟಿಜಿಟಿ ಮಳೆ ಸುರಿದಿದೆ. ಕಾಪು, ಪಡುಬಿದ್ರಿ, ಹೆಬ್ರಿ, ಮಾಳ, ಕಾರ್ಕಳ, ಬಜಗೋಳಿ ವ್ಯಾಪ್ತಿಯಲ್ಲಿಯೂ ಬಿಟ್ಟುಬಿಟ್ಟು ಉತ್ತಮ ವರ್ಷಧಾರೆಯಾಗಿದೆ. ಕುಂದಾಪುರ, ಬೈಂದೂರು, ಕೊಲ್ಲೂರು, ಸಿದ್ದಾಪುರ, ಕೋಟೇಶ್ವರ ಭಾಗದಲ್ಲಿ ಹಗಲಿಡಿ ಮೋಡಕವಿದ ವಾತಾವರಣದೊಂದಿಗೆ ಮಳೆಯಾಗಿದೆ.

ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಮುಂತಾದ ಕಡೆ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next