ದುಬಾೖ: ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದ ದುಬಾೖ ಸೇರಿದಂತೆ ಹಲವು ಭಾಗಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಗುಡುಗು ಮತ್ತು ಸಿಡಿಲು ಸಹಿತ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಇರಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
ಯುಎಇಯ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ ಜನರಿಗೆ ಮುನ್ನೆಚ್ಚರಿಕೆಯನ್ನೂ ನೀಡಿದೆ. ಹಲವೆಡೆ ಹಠಾತ್ ಮಳೆ ಮತ್ತು ಅದರಿಂದಾಗಿ ಪ್ರವಾಹ ಕೂಡ ಉಂಟಾಗಬಹುದು ಎಂದು ಸೂಚನೆ ನೀಡಿದೆ.
ದುಬಾೖಯಲ್ಲಿ ಇರುವ ನಿವಾಸಿಗಳ ಪೈಕಿ ತ್ರಿಪುರಾರಿ ಚೌಧರಿ ಎಂಬುವರು ಮಾಡಿರುವ ಟ್ವೀಟ್ ಪ್ರಕಾರ ಪ್ರಮುಖ ನಗರದಲ್ಲಿನ ರಸ್ತೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಶಬಾಬ್ ಜಾವೇದ್ ಎಂಬುವರು ತಮ್ಮ ಟ್ವೀಟ್‌ನಲ್ಲಿ ನಗರದ ಪ್ರಮುಖ ಭಾಗದಲ್ಲಿ ಮೊಣಕಾಲಿನಿಂದ ಹೆಚ್ಚಿನ ಪ್ರಮಾಣದ ನೀರು ನಿಂತಿರುವ ವೀಡಿಯೋ ಹಂಚಿಕೊಂಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಸಂಚಾರಿ ಪೊಲೀಸರು ಮತ್ತು ಇತರ ಅಧಿಕಾರಿಗಳು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ವಾಹನ ಸಂಚಾರ ಸುಗಮಗೊಳಿಸಲು ನೆರವಾಗಿದ್ದಾರೆ.