ನವದೆಹಲಿ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೋಮವಾರ (ಜುಲೈ 12) ಭಾರೀ ಮೇಘ ಸ್ಫೋಟದ ಪರಿಣಾಮ ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಗಿತ್ತು. ಅಲ್ಲದೇ ರಸ್ತೆ ಸಮೀಪ ನಿಲುಗಡೆ ಮಾಡಿದ್ದ ಹಲವಾರು ಕಾರುಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಚುನಾವಣಾ ರಣತಂತ್ರ ಹೂಡಲು ಕೇಜ್ರಿವಾಲ್ ನಾಳೆ ಗೋವಾಕ್ಕೆ ಆಗಮನ
ಮೆಕ್ಲಿಯೊಡ್ ಗಂಜ್ ಸಮೀಪದ ಭಾಗ್ಸು ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಭಾರೀ ಮಳೆ ಸುರಿದಿದ್ದು, ಹೋಟೆಲ್ ಗಳು ಹಾನಿಗೊಳಗಾಗಿರುವುದಾಗಿ ವರದಿಯಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ಹೇಳಿವೆ.
ಹಿಮಾಚಲ ಪ್ರದೇಶ ರಾಜಧಾನಿಯಿಂದ 250 ಕಿಲೋ ಮೀಟರ್ ದೂರದಲ್ಲಿರುವ ಧರ್ಮಶಾಲಾದಲ್ಲಿ ರಾತ್ರಿ ಇಡೀ ನಿರಂತರವಾಗಿ ಸುರಿದ ಮಳೆಯಿಂದಾಗಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿತ್ತು. ಧರ್ಮಶಾಲಾದಲ್ಲಿ ದಾಖಲೆ ಪ್ರಮಾಣದ 119 ಮಿ.ಮೀಟರ್ ಮಳೆಯಾಗಿತ್ತು. ಇದು ಮುಂಗಾರು ಮಳೆ ಆರಂಭವಾದ ನಂತರ ಸುರಿದ ಅತೀ ಹೆಚ್ಚಿನ ಮಳೆಯಾಗಿದೆ ಎಂದು ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ ಸಂಭವಿಸಿದ ಘಟನೆಗಳ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿದ್ದು, ಪರಿಸ್ಥಿತಿಯ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವರದಿ ವಿವರಿಸಿದೆ.