ಉಪ್ಪುಂದ: ಕೆಲವು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆ ಸೋಮವಾರ ಮುಂಜಾನೆಯಿಂದ ಬಿರುಸು ಪಡೆದುಕೊಂಡಿದೆ. ಮರವಂತೆ, ಉಪ್ಪುಂದ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದೆ.
ಉಪ್ಪುಂದ, ನಾವುಂದ, ಮರವಂತೆಯಲ್ಲಿ ರವಿವಾರ ರಾತ್ರಿ ಸ್ವಲ್ಪ ಮಳೆಯಾಗಿದ್ದು ಸೋಮವಾರ ಬೆಳ್ಗಗೆಯಿಂದಲೇ ಭಾರೀ ಗಾಳಿ ಮಳೆಯಾಗಿದೆ. ಸಾರ್ವಜನಿಕರ ನಿತ್ಯ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರಾ. ಹೆದ್ದಾರಿಯಲ್ಲಿ ಘನವಾಹನಗಳು ಸಾಗುವಾಗ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳ ಮೇಲೆ ನೀರು ಹಾರುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಮರವಂತೆ ಕಡಲ್ಬರ
ತ್ರಾಸಿ-ಮರವಂತೆ ಬೀಚ್‌ನಲ್ಲಿ ಕಡಲಿನ ಆರ್ಭಟ ಜೋರಾಗಿದೆ. ಬಹೃತ್ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಮಳೆಯ ನಡುವೆ ಆಗಾಗ ತೀವ್ರವಾದ ಗಾಳಿ ಬೀಸುತ್ತಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಔಟ್ಡೋರ್ ತೀರ ಪ್ರದೇಶದಲ್ಲಿ ದೊಡ್ಡ ಅಲೆಗಳು ಅಪ್ಪಳಿಸುತ್ತಿರುವುದರಿಂದ ತಡೆಗೋಡೆಯ ಮೇಲೆ ಇಟ್ಟಿರುವ ದೊಡ್ಡ ಗಾತ್ರದ ಮರಳಿನ ಚೀಲಗಳು ಸಮುದ್ರಕ್ಕೆ ಜಾರಿವೆ. ಅಲೆಗಳು ರಸ್ತೆ, ಸಮೀಪದಲ್ಲಿರುವ ಮನೆಯ ಅಂಗಳಕ್ಕೂ ಬರುವಂತಾಗಿದೆ. ಮೀನುಗಾರರ ಮನೆಗಳಿಗೆ ಯಾವುದೇ ಅಪಾಯದ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಮೀನುಗಾರರು ಮಾಹಿತಿ ನೀಡಿದ್ದಾರೆ.
ಮೋಡ ಹಾಗೂ ಭಾರೀ ಪ್ರಮಾಣದ ಮಳೆಯಿಂದಾಗಿ ಮಧ್ಯಾಹ್ನದ ಬಳಿಕ ಉಪ್ಪುಂದ, ಮರವಂತೆ ಪ್ರದೇಶದಲ್ಲಿ ಕತ್ತಲೆಯ ವಾತಾವರಣ ಕಂಡುಬಂದಿದೆ. ಬಿಜೂರು, ನಾಯ್ಕನಕಟ್ಟೆ, ಖಂಬದಕೋಣೆ, ನಾಗೂರು, ನಾವುಂದ, ಅರೆಹೊಳೆ ಪ್ರದೇಶದಲ್ಲಿನ ತೋಡುಗಳು ತುಂಬಿ ಹರಿಯುತ್ತಿವೆ.