ಹೊಸದಿಲ್ಲಿ: ಹವಾಮಾನ ಇಲಾಖೆಯ ಎಚ್ಚ ರಿಕೆಯಂತೆಯೇ ಹಲವು ರಾಜ್ಯಗಳಲ್ಲಿ ಮಳೆಯು ಅಬ್ಬರಿಸುತ್ತಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಮಳೆ ಪ್ರಮಾಣ ಹೆಚ್ಚಿದ್ದು, ಮಹಾರಾಷ್ಟ್ರ, ಪ. ಬಂಗಾಲ, ಗೋವಾ, ಮಧ್ಯಪ್ರದೇಶ, ಉತ್ತರಾಖಂಡ, ಗುಜರಾತ್, ಆಂಧ್ರ, ಝಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. 10 ಕಡೆ ಮರಗಳು ಧರಾಶಾಯಿಯಾಗಿವೆ. ಇನ್ನೂ 2 ದಿನ ಪುಣೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಲಾತೂರ್ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಸುರಿದ ಮಳೆಯಿಂದಾಗಿ 100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿವೆ.
2 ಸೇತುವೆಗಳು ಕೊಚ್ಚಿಹೋಗಿವೆ. ಬೀದರ್ – ನಾಂದೇಡ್ ಹೆದ್ದಾರಿಗೆ ತೀವ್ರ ಹಾನಿಯಾಗಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ.
ಗೋದಾವರಿ ನದಿ ಹರಿಯುತ್ತಿದ್ದು, ತೆಲಂಗಾಣಕ್ಕೆ ಪ್ರವಾಹದ ಎಚ್ಚರಿಕೆ ನೀಡ ಲಾಗಿದೆ. ಮಂಗಳವಾರ ಇಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂ ಚನೆ ನೀಡಿದೆ.
ಉತ್ತರಾಖಂಡದಲ್ಲಿ ಮಳೆ ಮುಂದುವರಿದಿದ್ದು, ಇನ್ನೂ 4 ದಿನ ಇದೇ ಸ್ಥಿತಿ ಇರಲಿದೆ. ರಾಜಸ್ಥಾನದಲ್ಲಿ ಸಿಡಿಲು ಬಡಿದು ಸೋಮವಾರ ನಾಲ್ವರು ಅಸುನೀಗಿದ್ದಾರೆ. ಒಡಿಶಾದಲ್ಲಿ ನಿರಂತರ ಮಳೆಯಾಗುತ್ತಿದೆ.