Advertisement

ಭಾರೀ ಮಳೆ: ಭತ್ತ ಕೃಷಿ ಸಂಪೂರ್ಣ ನಾಶ!

10:59 AM Aug 27, 2018 | |

ಆಲಂಕಾರು: ತೀವ್ರ ಮಳೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜೀವ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಒಂದೆಡೆಯಾದರೆ, ಭಾರೀ ಪ್ರಮಾಣದ ಕೃಷಿ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮುಖ್ಯವಾಗಿ ನೆರೆ ನೀರಿಗೆ ಸಿಲುಕಿ ಭತ್ತದ ಕೃಷಿ ನಾಶವಾಗಿದೆ.

Advertisement

ಕಡಬ ತಾಲೂಕಿನ ಆಲಂಕಾರು ಅತೀ ಹೆಚ್ಚು ಭತ್ತದ ಕೃಷಿ ಇರುವ ಗ್ರಾಮ. ಇಲ್ಲಿನ ಹೆಚ್ಚಿನ ಗದ್ದೆಗಳ ಭತ್ತದ ಪೈರುಗಳು ಹಾನಿಯಾಗಿವೆ. ಆಲಂಕಾರಿನ ಬಡ್ಡಮೆ, ಬುಡೇರಿಯಾ, ಪಜ್ಜಡ್ಕ, ಪೊಯ್ಯಲಡ್ಡ, ಶರವೂರು ಭಾಗದ 12 ಕುಟುಂಬಗಳ ಒಟ್ಟು 17 ಎಕರೆ ಪ್ರದೇಶದ ಭತ್ತ ನೆರೆ ಕುಮಾರಧಾರಾ ನದಿಯ ನೆರೆ ನೀರು ಆಕ್ರಮಿಸಿಕೊಂಡು ಕೊಳೆತು ಹೋಗಿದೆ. ಮಾಹಿತಿಗಳ ಪ್ರಕಾರ ಕಡಬ ತಾಲೂಕಿನಲ್ಲಿ ಒಟ್ಟು 20 ಎಕರೆ ಭತ್ತದ ಕೃಷಿ ಸಂಪೂರ್ಣ ನಾಶವಾಗಿದೆ. ಮರು ನಾಟಿಗೆ ಸಿದ್ಧತೆ ನಡೆಸುತ್ತಿದ್ದರೂ, ಬಿತ್ತನೆ ಬೀಜದ ಅಭಾವ ರೈತರನ್ನು ಕಾಡುತ್ತಿದೆ. ಏನೆಲು, ಸುಗ್ಗಿ, ಕೊಳಕೆ ಎನ್ನುವ ಮೂರು ಹಂತದ ಭತ್ತದ ಕೃಷಿ ಮಾಡಲಾಗುತ್ತಿತ್ತು. ನೇಜಿ ನಾಟಿ ಮಾಡಿದ 120 ದಿನಗಳಲ್ಲಿ ಕಟಾವಿಗೆ ಬರುತ್ತಿತ್ತು.

ಹಚ್ಚ ಹಸುರು ಮಾಯ!
ಕೆಲವೇ ದಿನಗಳ ಹಿಂದೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಭತ್ತದ ಗದ್ದೆ ಇದೀಗ ಬೈಹುಲ್ಲು ಹಾಸಿದ ರೀತಿ ಕಾಣುತ್ತಿದೆ. ರೈತನ ಕಣ್ಣುಗಳಿಂದ ನೀರು ಹರಿಯುತ್ತಿದೆ. ನೇಜಿ ಕೊಳೆತು ಹೋಗಿರುವುದರಿಂದ ಒಂದು ಅವಧಿಯ ಭತ್ತದ ಬೇಸಾಯವೂ ಕಳೆದುಹೋಗಿದೆ. ಪ್ರತಿ ರೈತ 30ರಿಂದ 50 ಸಾವಿರ ರೂ. ನಷ್ಟ ಅನುಭವಿಸಿದ್ದಾನೆ ಎಂದು ಅಂದಾಜಿಸಲಾಗಿದೆ. ಹಟ್ಟಿಗೊಬ್ಬರ, ರಸಗೊಬ್ಬರವೂ ನೀರು ಪಾಲಾಗಿ ನಷ್ಟವಾಗಿದೆ.

44 ವರ್ಷಗಳ ಬಳಿಕ
ಪ್ರತೀ ವರ್ಷ ಇಲ್ಲಿನ ಭತ್ತದ ಗದ್ದೆಗಳಿಗೆ ನೆರೆ ನೀರು ಬರುತ್ತಿತ್ತು. ಆದರೆ 1974ರ ಅನಂತರ ನೆರೆ ನೀರಿನಿಂದಾಗಿ ನಾಟಿ ಮಾಡಿದ ಭತ್ತದ ನೇಜಿ ಕೊಳೆತು ಹೋದ ಸಂದರ್ಭ ಎದುರಾಗಿರಲಿಲ್ಲ. ಈ ವರ್ಷ ನೇಜಿ ಕೊಳೆತು ಹೋಗಿರುವ ಜತೆಗೆ 10 ಎಕರೆ ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಕೂಡ ಅವಕಾಶವಿಲ್ಲದಂತಾಗಿ ರೈತರಿಗೆ ದೊಡ್ಡ ನಷ್ಟವಾಗಿದೆ. ನಾಶವಾಗಿರುವ ಭತ್ತದ ಕೃಷಿಗೆ 60 ದಿನಗಳು ಕಳೆದಿದ್ದು, ತೆನೆ ಕಟ್ಟುವ ಹಂತದಲ್ಲಿದ್ದವು. 

ಬಿತ್ತನೆ ಬೀಜ ವ್ಯವಸ್ಥೆ ಮಾಡಿ
ಈ ವರ್ಷ ತುಂಬಲಾರದ ನಷ್ಟ ಅನುಭವಿಸಿದ್ದೇವೆ. ಬೆಳೆ ಕೊಳೆಯಿ ತೆಂದು ಗದ್ದೆಯನ್ನು ಖಾಲಿ ಬಿಡುವ ಹಾಗಿಲ್ಲ. ಒಂದು ವಾರದೊಳಗೆ ಮರು ಉಳುಮೆ ಮಾಡಿ ನಾಟಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಆದರೆ ಇದೀಗ ನಮಗೆ ಬಿತ್ತನೆ ಬೀಜದ ಕೊರತೆ ಕಾಡುತ್ತಿದೆ. ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಇಲಾಖೆ ಪರಿಹಾರ ನೀಡುವುದರೊಂದಿಗೆ ಬಿತ್ತನೆ ಬೀಜಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.
– ದಯಾನಂದ ಗೌಡ ಬಡ್ಡಮೆ, ರೈತ

Advertisement

ವಿಕೋಪದಡಿ ಪರಿಹಾರ
ನಾಶವಾಗಿರುವ ಭತ್ತದ ಕೃಷಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಸಾಧ್ಯವಿದೆ. ಕಡಬ ವಲಯದಲ್ಲಿ ಆಲಂಕಾರು ಗ್ರಾಮ ಅತೀ ಹೆಚ್ಚು ಭತ್ತದ ಕೃಷಿ ನಾಶವಾಗಿರುವ ಪ್ರದೇಶವಾಗಿದೆ. ಭತ್ತದ ಕೃಷಿ ನಾಶವಾಗಿರುವ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ನಷ್ಟ ಸಂಭವಿಸಿದ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಬಿತ್ತನೆ ಬೀಜವು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಯಾವ ರೀತಿಯಲ್ಲಿ ರೈತರಿಗೆ ವಿತರಣೆ ಮಾಡಬೇಕು ಎಂದು ಜಿಲ್ಲಾಡಳಿತ ನಿರ್ಧರಿಸಲಿದೆ.
– ತಿಮ್ಮಪ್ಪ ಗೌಡ,
ಕಡಬ ವಲಯ ಸಹಾಯಕ ಕೃಷಿ ಅಧಿಕಾರಿ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next