Advertisement

ಕಂಡು ಕೇಳರಿಯದ ಭಾರೀ ಮಳೆ: ಗ್ರಾಮೀಣ ಜನತೆ ತತ್ತರ 

10:46 AM Aug 17, 2018 | Team Udayavani |

ಉಪ್ಪಿನಂಗಡಿ : ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಈ ವರ್ಷ ಮೂರು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಸಂಗಮಗೊಂಡು ಉಕ್ಕಿ ಹರಿಯುತ್ತಿದ್ದು, ಸಂಜೆ 4 ಗಂಟೆ ಸುಮಾರಿಗೆ ನದಿ ನೀರು ದೇವಸ್ಥಾನದ ಒಳ ಪ್ರಾಂಗಣವನ್ನು ಪ್ರವೇಶಿಸಿದ ಬಳಿಕ ನದಿಗಳು ಶಾಂತಗೊಳ್ಳುವಂತೆ ಪ್ರಾರ್ಥಿಸಿ, ಸಂಗಮ ಪೂಜೆಯನ್ನು ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್‌ ಉಪಾಧ್ಯಾಯ, ಸಹ ಅರ್ಚಕರಾದ ಶಂಕರ್‌ ಭಟ್‌, ಮಧುಸೂದನ ಭಟ್‌ ಪೂಜಾ ಕೈಂಕರ್ಯವನ್ನು ನೆರವೇರಿಸಿದ ಬಳಿಕ ಸಾವಿರಾರು ಭಕ್ತರು ಸಂಗಮ ತೀರ್ಥ ಸ್ನಾನ ಮಾಡಿ ಪುನೀತರಾದರು.

Advertisement

ಅಕಾಲಿಕ ತೆರೆದ ಗರ್ಭಗುಡಿ
ಮಧ್ಯಾಹ್ನ ಪೂಜೆಯ ಬಳಿಕ ಮುಚ್ಚುವ ದೇಗುಲದ ಗರ್ಭಗುಡಿಯ ಬಾಗಿಲು ಮತ್ತೆ ತೆರೆಯುವುದು ಸಂಜೆಯೇ. ಆದರೆ, ನದಿಗಳು ಉಕ್ಕೇರಿ ಬಂದ ಹಿನ್ನೆಲೆಯಲ್ಲಿ ಗಂಗಾಪೂಜೆ ನೆರವೇರಿಸುವ ಸಲುವಾಗಿ ಅಕಾಲಿಕವಾಗಿ ಗರ್ಭಗುಡಿಯ ಬಾಗಿಲು ತೆರೆಯುವ ಅನಿವಾರ್ಯತೆ ಮೂಡಿತು. ತಂತ್ರಿಗಳ ಸಲಹೆ ಪಡೆದು, ಭಕ್ತರ ಹಿತಕ್ಕಾಗಿ ಅಕಾಲಿಕವಾಗಿ ಗರ್ಭಗುಡಿ ಬಾಗಿಲು ತೆರೆಯಬಹುದು ಎಂಬ ನಿರ್ದೇಶನದ ಮೇರೆಗೆ ಬಾಗಿಲು ತೆರೆದು, ಗಂಗಾಪೂಜೆ ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ನಾಯಕ್‌, ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಡಾ|ರಾಜಾರಾಮ ಕೆ.ಬಿ. ಉಪಸ್ಥಿತರಿದ್ದರು. ಸಂಗಮ ವೀಕ್ಷಿಸುವ ಕುತೂಹಲ ಹಾಗೂ ಪುಣ್ಯಸ್ನಾನ ಮಾಡುವ ಹಂಬಲದೊಂದಿಗೆ ಸಹಸ್ರಾರು ಜನ ಉಪ್ಪಿನಂಗಡಿಗೆ ಆಗಮಿಸಿದ್ದರು. ಎದೆಯ ಮಟ್ಟ ನೀರಿನಲ್ಲಿ ನಿಂತು ಪುಣ್ಯಸ್ನಾನ ಮಾಡಿದರು.

ಉಪ ವಿಭಾಗಾಧಿಕಾರಿ ಭೇಟಿ
ನದಿಗಳು ಉಕ್ಕಿ ನೆರೆ ಭೀತಿ ಮೂಡುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣ ಮೂರ್ತಿ, ಮುಳುಗಡೆಯಾದ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲು ಬೋಟ್‌ ಗಳನ್ನು ಕಳುಹಿಸಿಕೊಟ್ಟರು. ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳನ್ನು ತುರ್ತು ಸಭೆಗೆ ಆಹ್ವಾನಿಸಿ, ಪರಿಹಾರ ಕ್ರಮಗಳ ಕುರಿತು ಸೂಕ್ತ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next