Advertisement

ಭಾರೀ ಮಳೆ: ಜಿಲ್ಲೆಯಲ್ಲಿ 325 ಹೆಕ್ಟೇರ್‌ ಭತ್ತದ ಕೃಷಿ ಮಣ್ಣು ಪಾಲು!

09:48 PM Aug 30, 2019 | Team Udayavani |

ಉಡುಪಿ: ಸತತ ಒಂದು ವಾರ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯಲ್ಲಿ 325 ಹೆಕ್ಟೇರ್‌ ಪ್ರದೇಶದ ಭತ್ತದ ಕೃಷಿ ಮಣ್ಣುಪಾಲಾಗಿದ್ದು, ಬೆಳೆಗಾರರು ಮತ್ತೆ ಭತ್ತದ ಕೃಷಿಯಿಂದ ಹಿಂದೆ ಸರಿಯುವಂತಹ ದುಃಸ್ಥಿತಿ ಎದುರಾಗಿದೆ.

Advertisement

36,000 ಹೆಕ್ಟೇರ್‌ ಭತ್ತದ ಕೃಷಿ
ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ ಮೂರೂ ತಾಲೂಕಿ ನಲ್ಲಿ 36,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಕೃಷಿ ಇಲಾಖೆ ಗುರಿ ಹೊಂದಿತ್ತು. ಆದರೆ ಈ ಬಾರಿ ಭೀಕರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳಲ್ಲಿ ತ್ಯಾಜ್ಯಗಳು, ಮರಳು ತುಂಬಿಕೊಂಡಿದ್ದು, ಇದೀಗ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪೈರು ಕೊಳೆತು ಹೋಗಿದೆ
ಗದ್ದೆಗಳನ್ನು ಪಾಳು ಬಿಡಬಾರದೆಂಬ ನಿಟ್ಟಿನಲ್ಲಿ ಬೆಳೆಗಾರರು ಭತ್ತದ ನಾಟಿ ಮಾಡಿದ್ದರು. ಈ ಬಾರಿ ಆರಂಭದಲ್ಲೇ ಮುಂಗಾರು ಕೊರತೆ ಎದುರಿಸಿದ್ದ ಬೆಳೆಗಾರರು ಒಂದು ತಿಂಗಳು ತಡವಾಗಿಯೇ (ಜುಲೈ ಕೊನೆಯಲ್ಲಿ) ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಆ.6ರಿಂದ ಸತತವಾಗಿ 10 ದಿನಗಳವರೆಗೆ ಸುರಿದ ಮಹಾ ಮಳೆ ಭತ್ತದ ಗದ್ದೆಗಳನ್ನು ಕೆರೆಯಂತಾಗಿಸಿದೆ. ಸುಮಾರು ಒಂದು ವಾರಗಳ ಕಾಲ ನಾಟಿ ಮಾಡಿದ್ದ ಭತ್ತದ ಪೈರು ನೀರಿನಲ್ಲೇ ಕೊಳೆತು ಹೋಗಿದೆ.

ಮರುನಾಟಿಯಿಂದ ವಂಚಿತ ರೈತರು
ಹಿಂದೆ ಪ್ರವಾಹದಿಂದಾಗಿ ನಾಟಿ ಮಾಡಿದ್ದ ಭತ್ತದ ಕೃಷಿಗೆ ಹಾನಿಯಾದರೆ ಕೃಷಿ ಇಲಾಖೆಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಮರುಬೀಜ ಬಿತ್ತನೆ ಅವಧಿಯಲ್ಲಿ ಭಾರೀ ಮಳೆಯಾಗಿರುವುದರಿಂದ ಕೃಷಿ ಭೂಮಿ ಜಲಾವೃತ್ತವಾಗಿತ್ತು. ಇದರಿಂದಾಗಿ ರೈತರಿಗೆ ಮರು ಬೀಜ ಬಿತ್ತನೆಗೆ ಅವಕಾಶ ದೊರಕ್ಕಿಲ್ಲ.

ನಷ್ಟ ಪರಿಹಾರ
ಮೊತ್ತ ನಿಗದಿ
ಜಿಲ್ಲೆಯಲ್ಲಿ ಮಳೆಯಿಂದಾಗಿ 325 ಹೆಕ್ಟೇರ್‌ ಭತ್ತದ ಕೃಷಿ ನಾಶವಾಗಿದೆ. ಸರಕಾರದಿಂದ ರೈತರಿಗೆ ಪ್ರತಿ ಹೆಕ್ಟೇರ್‌ಗೆ6,800 ರೂ. ನಷ್ಟ ಪರಿಹಾರ ನಿಗದಿಪಡಿಸಲಾಗಿದೆ.
-ಚಂದ್ರಶೇಖರ್‌ ನಾಯ್ಕ, ಕೃಷಿ ಇಲಾಖೆ ಉಪ ನಿರ್ದೇಶಕ, ಉಡುಪಿ ಜಿಲ್ಲೆ

Advertisement

ಸರ್ವೆ ಕಾರ್ಯ
ಈಗಾಗಲೇ ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ 325ಹೆಕ್ಟೇರ್‌ ಪ್ರದೇಶ ದಲ್ಲಿನ ಭತ್ತದ ಗದ್ದೆ ಹಾನಿಗೊಳಗಾಗಿದ್ದು, ಅಂದಾಜು 22 ಲ.ರೂ. ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಇದೀಗ ರೈತರ ಭತ್ತದ ಗದ್ದೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ತೆರಳಿ ಸರ್ವೇ ಕಾರ್ಯ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ. ಅನಂತರ ನಿಯಮದಂತೆ ಕೃಷಿಕರಿಗೆ ಪರಿಹಾರ ದೊರಕಲಿದೆ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next