ಯಾದಗಿರಿ: ಜಿಲ್ಲೆಯಲ್ಲಿ ರವಿವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ದಾಖಲೆಯ 142 ಮಿ.ಮೀ ಮಳೆಯಾಗಿದೆ. ಇತ್ತೀಚೆಗಷ್ಟೇ ಜುಲೈ 15ರಂದು ಸಹ ಜಿಲ್ಲೆಯಲ್ಲಿ 129 ಮಿ.ಮೀ ಮಳೆಯಾಗಿತ್ತು ಇದರಿಂದ ಜನಜೀವನ ಅಸ್ತವ್ಯಸ್ಥಗೊಂಡು ಜಿಲ್ಲಾ ಕೇಂದ್ರದ ಅಂಬೇಡ್ಕರ್ ನಗರದಲ್ಲಿ ಮನೆಗಳು ಜಲಾವೃತಗೊಂಡಿತ್ತು.
ಇನ್ನು ಜೂನ್ 27ರಂದು ಜಿಲ್ಲೆಯ ಶಹಾಪುರದಲ್ಲಿಯೂ ರಾಜ್ಯದಲ್ಲಿಯೇ ದಾಖಲೆಯ 153 ಮಿ.ಮೀ ಮಳೆಯಾಗಿ ಅವಾಂತರ ಸೃಷ್ಟಿಸಿತ್ತು. ಜಿಲ್ಲೆಯಾದ್ಯಂತ ಹಳ್ಳ ಕೊಳ್ಳಗಳಿಗೆ ಮಳೆಯಿಂದ ಜೀವ ಕಳೆ ಬಂದಿದ್ದು, 2019ರ ವರೆಗೆ ಸತತ ಬರಪೀಡಿತವಾಗಿದ್ದ ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ.
ಯಾದಗಿರಿ ತಾಲೂಕಿನಲ್ಲಿ 142 ಮಿ.ಮೀ, ಗುರುಮಠಕಲ್ ವ್ಯಾಪ್ತಿಯಲ್ಲಿ 22 ಮಿ.ಮೀ, ಸುರಪುರ ವ್ಯಾಪ್ತಿಯಲ್ಲಿ 48, ವಡಗೇರಾ 31ಮಿ.ಮೀ, ಶಹಾಪುರದಲ್ಲಿ 12ಮಿ.ಮೀ, ಹುಣಸಗಿಯಲ್ಲಿ 38ಮಿ.ಮೀ ಮಳೆಯಾಗಿರುವ ಕುರಿತಿ ವರದಿಯಾಗಿದೆ.
ಇದೀಗ ನಿನ್ನೆ ಸುರಿದ ಮಳೆಯಿಂದ ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲೂಕಿನ ಕೋನಹಳ್ಳಿಯ ಪರಿಶಿಷ್ಟರ ಬಡಾವಣೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ.
ಬಡವಣೆಯಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆಯಿಲ್ಲ ಯಾವೊಬ್ಬ ಜನಪ್ರತಿನಿಧಿಗಳು ತಮ್ಮ ಗೋಳು ಆಲಿಸಿಲ್ಲ, ಚುನಾವಣೆ ಬಂದವರು ಇನ್ನುವರೆಗೆ ಪತ್ತೆಯಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕರು ತಕ್ಷಣವೇ ಭೇಟಿ ನೀಡಿ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.