Advertisement

Heavy Rain: ಪ್ರಾಕೃತಿಕ ವಿಕೋಪ ಬಗ್ಗೆ ಮುನ್ನೆಚ್ಚರಿಕೆಗೆ ಸೂಚನೆ

12:17 AM Aug 18, 2024 | Team Udayavani |

ಮಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ನಡೆಯಿತು.

Advertisement

ಸಚಿವರು ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಭಾರೀ ಮಳೆಯಿಂದ ಹಲವಾರು ಹಾನಿಗಳು ಉಂಟಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ಫೋರ್ಸ್‌ ಕಮಿಟಿ ಸ್ಥಾಪಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಅಂಗನವಾಡಿಗಳನ್ನು ಗುರುತಿಸಿ ಕೂಡಲೇ ಸ್ಥಳಾಂತರಿಸಬೇಕು ಹಾಗೂ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಕಾಲು ಸಂಕ, ಸೇತುವೆಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.

ರಾಜ್ಯದಲ್ಲಿ ನೀರಿನಿಂದ ಕೊಚ್ಚಿ ಹೋಗಿ ಹಲವಾರು ಸಾವು, ನೋವು ಉಂಟಾದ ಘಟನೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಮಹಿಸಬೇಕು. ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸದೆ ಸಾವು ನೋವುಗಳು ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮುಲ್ಲೈ  ಮುಗಿಲನ್‌ ಅವರು ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ, ಕೂಳೂರು ಸೇತುವೆ ಹಾಗೂ ಕೆತ್ತಿಕಲ್ಲು ಗುಡ್ಡದಿಂದ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಅಪಾಯದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವಂತೆ ಹಾಗೂ ಉನ್ನತ ಮಟ್ಟದ ತಾಂತ್ರಿಕತೆ ಬಳಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಿದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಯತೀಶ್‌, ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್‌ ಕುಮಾರ್‌, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್‌ ಮಹಾಪಾತ್ರ, ಮಂಗಳೂರು ಎ.ಸಿ. ಹರ್ಷವರ್ಧನ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next