ಉಡುಪಿ: ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ನಿರಂತರ ಮಳೆ ಸುರಿದಿದೆ. ಕುಂದಾಪುರ, ಕಾರ್ಕಳ, ಉಡುಪಿ, ಕಾಪು, ಬ್ರಹ್ಮಾವರ, ಹೆಬ್ರಿ ಭಾಗದಲ್ಲಿ ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ಕಡಲು ಕೊರೆತ ತೀವ್ರಗೊಂಡಿದೆ. ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಉಡುಪಿ ನಗರ ಭಾಗದ ಬನ್ನಂಜೆ ಗರಡಿ ರಸ್ತೆಯಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
ವಿವಿಧೆಡೆ ವಿದ್ಯುತ್ ಕಂಬಗಳು, ಟ್ರಾನ್ಸಾಫಾರ್ಮರ್, ತಂತಿಗಳಿಗೆ ಹಾನಿ ಉಂಟಾಗಿದ್ದು ಒಟ್ಟು 68.69 ಲ.ರೂ. ನಷ್ಟವಾಗಿದೆ. 24 ಟ್ರಾನ್ಸ್‌ಫಾರ್ಮರ್, 248 ಕಂಬಗಳು, 5.98 ಮೀಟರ್ ತಂತಿಗಳಿಗೆ ಹಾನಿಯಾಗಿದೆ.
ಮಾಹಿತಿ ನೀಡಲು ಸೂಚನೆ: ಟ್ರಾನ್ಸ್‌ಫಾರ್ಮರ್ ಬಿದ್ದಾಗ, ದುರಸ್ತಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಉಳಿದಂತೆ ತಂತಿಗಳು, ಕಂಬಗಳಿಗೆ ಹಾನಿ ಯಾದಾಗ 2 ಗಂಟೆಯೊಳಗೆ ದುರಸ್ತಿ ಮಾಡಲಾಗುತ್ತದೆ ಎಂದು ಮೆಸ್ಕಾಂ ಎಂಜಿನಿಯರ್ ತಿಳಿಸಿದ್ದಾರೆ. ದೀರ್ಘಾವಧಿ ವಿದ್ಯುತ್ ಕಡಿತ ಅಥವಾ ವಿದ್ಯುತ್ ಕಂಬಗಳಲ್ಲಿ ತೊಂದರೆ ಇದ್ದಾಗಲೂ ಸಮಸ್ಯೆ ಉದ್ಭವಿಸುತ್ತದೆ. ಟೋಲ್ ಫ್ರೀ ಸಂಖ್ಯೆ 1912ಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಕಳದಲ್ಲಿ 3 ಗಂಟೆ ಟ್ರಾಫಿಕ್ ಜಾಮ್
ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಕೆಳ ಪರ್ಕಳ ತಿರುವಿನಲ್ಲಿ ಮಗುಚಿ ಬಿದ್ದ ಕಂಟೈನರ್ ಲಾರಿಯನ್ನು ಮೇಲೆತ್ತಲು ಹರಸಹಾಸ ಪಡಬೇಕಾಯಿತು. ಸತತ ಪ್ರಯತ್ನಗಳ ಹೊರತಾಗಿಯೂ ಕಂಟೈನರನ್ನು ಮೇಲಕ್ಕೆ ಎತ್ತಲು ಸಾಧ್ಯವಾಗಿಲ್ಲ. ಪರಿಣಾಮ 3 ಗಂಟೆ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಅನಂತರ 80ಬಡಗಬೆಟ್ಟು ಇಂಡಸ್ಟ್ರಿಯಲ್ ಏರಿಯಾ ಮೂಲಕ ಮಣಿಪಾಲ ಉಡುಪಿ ಕಡೆಗೆ ವಾಹನಗಳು ಸಂಚರಿಸಿದವು. ಕಂಟೈನರ್ ಮೇಲಕ್ಕೆತ್ತುವ ಕಾರ್ಯಾಚರಣೆ ಬುಧವಾರ ನಡೆಯುವ ಸಾಧ್ಯತೆ ಇದೆ.