Advertisement

ಹೈ-ಕದಲ್ಲಿ ಭಾರೀ ಮಳೆ: ಸಿಡಿಲಿಗೆ ಇಬ್ಬರು ಬಲಿ

07:40 AM Sep 15, 2017 | |

ಬೆಂಗಳೂರು: ಗದಗ, ಕಲಬುರಗಿ, ಬಾಗಲಕೋಟೆ, ಬೀದರ್‌, ಹಾವೇರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

Advertisement

ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ರಾಜ್ಯದ ಲ್ಲಿಯೇ ಅಧಿಕ, 12 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.

ಸಿಡಿಲು ಬಡಿದು ಸೇಡಂ ತಾಲೂಕಿನ ಕಾಚವಾರದಲ್ಲಿ ರಾಮಪ್ಪ ಹಣಮಂತ ಹಂದರಕಿ ಹಾಗೂ ಆಳಂದ ಪಟ್ಟಣದ ಪೊಲೀಸ್‌ ಠಾಣೆ ಹತ್ತಿರ ಗುಡಿಸಲು ಹಾಕಿಕೊಂಡಿದ್ದ ಹುಲೆಪ್ಪ ಮರೆಪ್ಪ (40)ಎಂಬುವರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಶಿರಸಿ, ಸಿದ್ದಾಪುರ, ಮಂಗಳೂರು, ಉಡುಪಿಯಲ್ಲಿಯೂ ಮಳೆಯಾಗಿದೆ.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೂ ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, 40 ಮಿ.ಮೀ. ಮಳೆಯಾಗಿದೆ. ಕಲಬುರಗಿಯ ಖಾಜಾಬಂದೇನವಾಜ್‌ ಆಸ್ಪತ್ರೆಯ ಮೂರು ಮಕ್ಕಳ ವಾರ್ಡ್‌ಗಳಲ್ಲಿ ನೀರು ನುಗ್ಗಿದ್ದರಿಂದ ಮಕ್ಕಳನ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ವಾರ್ಡ್‌ನೊಳಗೆ ಬಂದ ನೀರನ್ನು ಹೊರ ಹಾಕಲು ಸಿಬ್ಬಂದಿ ಪರದಾಡಿದರು. ನಗರದ ಸರಕಾರಿ ಬಾಲಕರ ಪ್ರೌಢಶಾಲೆ ಆವರಣ, ಹನುಮಾನ ನಗರದ ಹಾಸ್ಟೆಲ್‌ಗೆ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಮಳೆಗೆ ನಗರದ ಹಳ್ಳದ ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಸಂಪೂರ್ಣ ಕಡಿತ ಗೊಂಡಿತ್ತು. ಜಿಲ್ಲೆಯ ಜೀವನದಿ ಕಾಗಿಣಾ ಉಕ್ಕಿ ಹರಿಯುತ್ತಿದ್ದು  ನದಿ ಪಾತ್ರದ ಹಳ್ಳಿಗಳು ಜಲಾವೃತಗೊಂಡಿವೆ.

ಇನ್ನೆರಡು
ದಿನ ಮಳೆ

ಶನಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next