Advertisement

ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ರಸ್ತೆ: ದಿನ ನಿತ್ಯ ಓಡಾಟಕ್ಕೆ ತೊಂದರೆ

12:04 PM May 24, 2022 | Team Udayavani |

ಕೊರಟಗೆರೆ: ಮಳೆಯ ಆರ್ಭಟಕ್ಕೆ ರಸ್ತೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡು 4-5 ದಿನ ಕಳೆದರೂ ದುರಸ್ತಿಯಾಗದೇ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನ ನಿತ್ಯ ಓಡಾಟಕ್ಕೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟಂತಹ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ದ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಹೊಳವನಹಳ್ಳಿ ಹೋಬಳಿಯ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬುಗಾನಹಳ್ಳಿಯಲ್ಲಿ, ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಕಡಿತವಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಂದು ಕಿಲೋಮೀಟರ್ ಪ್ರಯಾಣ ಬದಲಿಗೆ, ಹತ್ತು ಕಿಲೋಮೀಟರ್ ಸುತ್ತುವರೆದು ಪ್ರತಿದಿನ ಪ್ರಯಾಣಿಸುವಂತಾಗಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಆಶ್ಲೇಷ, ಸ್ವಾತಿ ಮತ್ತು ವಿಶಾತಿ ಮಳೆಯ ಅಬ್ಬರಕ್ಕೆ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಎಲೆರಾಂಪುರ ಮತ್ತು ತೀತಾ ಕೆರೆ ಕೋಡಿ ಬಿದ್ದು ಹೆಚ್ಚಿನ ನೀರು ರಭಸವಾಗಿ ಜಯಮಂಗಲಿ ನದಿಯ ಮೂಲಕ ರಭಸವಾಗಿ ‌ಹರಿದು ತುಂಬುಗಾನಹಳ್ಳಿ ಹಾಗೂ ತೀತಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ತುಂಬುಗಾನಹಳ್ಳಿ ಹಾಗೂ ಟಿ. ವೆಂಕಟಾಪುರ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳು ಮಳೆಯ ನೀರಿನ ರಭಸಕ್ಕೆ ರಸ್ತೆ ಕಡಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಗಳು, ರಾಜಕಾರಣಿಗಳು ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ರಾಜ್ಯದ ಹಲವು ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಇಂದಿಗೂ ರಸ್ತೆಗಾಗಿ ಅಲೆದಾಟ ಮಾತ್ರ ತಪ್ಪಿಲ್ಲ, ಎಷ್ಟೋ ಕುಗ್ರಾಮ ಹಾಗೂ ಗಡಿ ಪ್ರದೇಶಗಳ ಹಳ್ಳಿಗಳಿಗೆ ಸಮರ್ಪಕ ರಸ್ತೆ ಸೌಕರ್ಯಗಳಿಲ್ಲದೆ, ಮುಂಗಾರು ಹಾಗೂ ಹಿಂಗಾರು ಸಂದರ್ಭದಲ್ಲಿ ಬೇಸಾಯದ ಪರಿಕರಗಳನ್ನು ಸಾಗಿಸಲಾಗದೆ ಹರಸಾಹಸ ಪಡುತ್ತಿದ್ದಾರೆ.

Advertisement

ತುಂಬುಗಾನಹಳ್ಳಿ ಗ್ರಾಮ ಜಯಮಂಗಲಿ ನದಿಯ ದಂಡೆಯಲ್ಲಿದ್ದು, ತೀತಾ ಹಾಗೂ ‌ಟಿ.ವೆಂಕಟಾಪುರ  1-2 ಕಿ.ಮೀ ದೂರದಲ್ಲಿದ್ದು, ರಸ್ತೆ ಕಡಿತದಿಂದ ಸಾರ್ವಜನಿಕರ ಅವಶ್ಯಕ ವಸ್ತುಗಳ ಖರೀದಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸಲು ಇದ್ದಂತಹ ಒಂದೇ ರಸ್ತೆ ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಪರಿಣಾಮ ವಿದ್ಯಾರ್ಥಿಗಳು ಒಂದು ಕಿಲೋಮೀಟರ್ ಅಂತರದ ಪ್ರಯಾಣವನ್ನು ಏಳೆಂಟು ಕಿಲೋಮೀಟರ್ ಬಳಸಿಕೊಂಡು ಬರುವಂತಹ ದುಸ್ಥಿತಿ ನಿರ್ಮಾಣವಾಗಿ 8-10 ತಿಂಗಳುಗಳು ಕಳೆದರೂ ರಾಜಕಾರಣಿಗಳು, ಜನಪ್ರತಿನಿಧಿಗಳು ಗಮನಹರಿಸದೆ ಕಣ್ಮುಚ್ಚಿ ಕುಳಿತಿರುವುದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಸಾರ್ವಜನಿಕರ ಆರ್ಥಿಕ ಸ್ಥಿತಿಗತಿ ಹೆಚ್ಚಿಸಿಕೊಳ್ಳಲು ರಸ್ತೆ ಸಂಪರ್ಕ ಬಹುಮುಖ್ಯ ಸಾಧನವಾಗಿದ್ದು, ಇಂತಹ ರಸ್ತೆ ಸಂಪರ್ಕಗಳು ಕಡಿತಗೊಂಡು ಆರೇಳು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ಇರುವುದು ವಿಪರ್ಯಾಸ. ರಸ್ತೆ ಸಂಪರ್ಕದ ಬಗ್ಗೆ ಅತಿ ಶೀಘ್ರವಾಗಿ ಅಧಿಕಾರಿಗಳು ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. -ನಳೀನಾ ಸತೀಶ್ ಗ್ರಾಪಂ ಸದಸ್ಯರು ತುಂಬುಗಾನಹಳ್ಳಿ

ತುಂಬುಗಾನಹಳ್ಳಿ ಹಾಗೂ ತೀತಾ ನಡುವೆ ಸಂಪರ್ಕ ಕಲ್ಪಿಸುವಂಥ ನಕಾಶೆ ರಸ್ತೆ ಇದ್ದು, ಈ ನಕಾಶೆ ರಸ್ತೆಯನ್ನು ಅಕ್ಕಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡು ರಸ್ತೆಯನ್ನು ಕಿರುದಾಗಿ ಮಾಡಿದ್ದಾರೆ. ಜೊತೆಗೆ ಮಳೆಯ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ನಿರ್ಮಾಣ ಮಾಡಿಕೊಡಬೇಕು ಹಾಗೂ ರಸ್ತೆ ಒತ್ತುವರಿಯನ್ನು ತೆರುವು ಮಾಡಿಕೊಡಬೇಕು -ನರಸಿಂಹರಾಜು ತೀತಾ  ಗ್ರಾಪಂ ಸದಸ್ಯರು, ತುಂಬುಗಾನಹಳ್ಳಿ

ತೀತಾ ಹಾಗೂ ತುಂಬುಗಾನಹಳ್ಳಿ ನಡುವೆ ರಸ್ತೆ ಸಂಪರ್ಕ ಕಡಿತಗೊಂಡು 6-7 ತಿಂಗಳಾದರೂ ಅಧಿಕಾರಿಗಳು ಗಮನಹರಿಸದಿರುವುದು ಬಹಳ ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು. -ರುದ್ರೇಶ್ ರೈತ

-ಸಿದ್ದರಾಜು. ಕೆ. ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next