ಸಿದ್ದಾಪುರ: ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣ ಗುಲಾಬಿ ಶೆಟ್ಟಿ ಅವರ ಮನೆಯ ಮೇಲೆ ಎ. 20ರಂದು ರಾತ್ರಿ ಭಾರೀ ಗಾಳಿ ಮಳೆಗೆ ಮಾವಿನ ಮರವೊಂದು ತುಂಡಾಗಿ ಬಿದ್ದು, ಮೂವರು ಗಾಯಗೊಂಡಿದ್ದಾರೆ.
ಮರ ಬಿದ್ದ ಪರಿಣಾಮ ಅಡುಗೆ ಕೋಣೆ, ಬಚ್ಚಲು ಮನೆ ಹಾನಿ ಗೀಡಾಗಿದೆ. ಈ ಸಂದರ್ಭದಲ್ಲಿ ಮನೆಯ ಒಳಗಿದ್ದ ಗುಲಾಬಿ ಶೆಟ್ಟಿ, ಅವರ ಮಕ್ಕಳಾದ ಸುಜಾತಾ ಮತ್ತು ಸವಿತಾ ಅವರಿಗೆ ಗಾಯಗಳಾಗಿವೆ. ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಲಾಬಿ ಶೆಟ್ಟಿಯ ಪತಿ ರಾಜೀವ ಶೆಟ್ಟಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮರಳಿದ್ದಾರೆ. ಸುಮಾರು 1 ಲಕ್ಷ ರೂ. ಮಿಕ್ಕಿ ಹಾನಿ ಸಂಭವಿಸಿದೆ.
ಎರಡಂತಸ್ತಿನ ಈ ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿದ್ದವು. ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರರು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಚಂದ್ರಶೇಖರ ಮೂರ್ತಿ ಹಾಗೂ ಹೊಸಂಗಡಿ ಗ್ರಾ.ಪಂ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಾಲೂಕು ಆಡಳಿತಕ್ಕೆ ವರದಿ ನೀಡಿದ್ದಾರೆ.