Advertisement

ಈ ಬಾರಿಯೂ ಕಾಫಿನಾಡಲ್ಲಿ ಅತಿವೃಷ್ಟಿ ಹಾನಿ

05:25 PM Sep 16, 2021 | Team Udayavani |

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿಯೂ ಅತೀವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಜಿಲ್ಲೆಯ ಮಲೆನಾಡು
ಭಾಗದಲ್ಲಿ ಅತಿವೃಷ್ಟಿಯಿಂದ ಈ ಬಾರಿಯೂ ಜನ ತೊಂದರೆಗೀಡಾಗಿದ್ದು, ಸತತ ಮೂರ್‍ನಾಲ್ಕು ವರ್ಷದ ಮಳೆ ಅಬ್ಬರಕ್ಕೆ ಜನ ತತ್ತರಿಸಿಹೋಗಿದ್ದಾರೆ.

Advertisement

ಈ ಬಾರಿ ಜುಲೈ 21ರಿಂದ ಆಗಸ್ಟ್‌ 11ರ ವರೆಗೆ ಸುರಿದ ಮಳೆಗೆ 142.41 ಕೋಟಿ ರೂ. ನಷ್ಟವಾಗಿದೆ ಎಂದು ಈಗಾಗಲೇ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲಾಡಳಿತ, ಹಾಗೂ ತೊಂದರೆಗೊಳಗಾದ ಜನ ಸರ್ಕಾರದಿಂದ ಅತಿವೃಷ್ಟಿ ಪರಿಹಾರದ ನೀರಿಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಜೀವಹಾನಿ, ಮನೆ, ಬೆಳೆ, ಸಾರ್ವಜನಿಕ ಮೂಲ ಸೌಕರ್ಯಗಳಿಗೆ ಅಪಾರ
ಪ್ರಮಾಣದ ಹಾನಿಯಾಗಿತ್ತು. ಮೂರು ವರ್ಷಗಳಿಂದ ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ವರ್ಷ ಸಹ ಮಲೆನಾಡು ಭಾಗದಲ್ಲಿ ಭೂಕುಸಿತ, ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಅತೀಹೆಚ್ಚು ಹಾನಿಯಾಗಿರುವ ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿದೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕು ಪ್ರವಾಹ ಪೀಡಿತ ತಾಲೂಕು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.

ವಿವಿಧ ಇಲಾಖೆ ಆಸ್ತಿಗೆ ಹಾನಿ: ಈ ವರ್ಷ ಜಿಲ್ಲಾದ್ಯಂತ ಸುರಿದ ಮಳೆಯಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ತಲಾ 1 ಜಾನುವಾರು ಮೃತಪಟ್ಟಿವೆ. 535.11 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 222 ಮನೆಗಳಿಗೆ ಧಕ್ಕೆಯಾಗಿದೆ. ಲೋಕೋಪಯೋಗಿ ಇಲಾಖೆಯ 50.53 ಕೋಟಿ ರೂ, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 77.50 ಕೋಟಿ ರೂ. ಸಣ್ಣ ನೀರಾವರಿ ಇಲಾಖೆ 9.38 ಕೋಟಿ ರೂ. ಯುಎಲ್‌ಬಿಎಸ್‌ ನಲ್ಲಿ 89ಲಕ್ಷ ರೂ. ಮೆಸ್ಕಾಂ 54.48 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಜಮ್ಮು ಕಾಶ್ಮೀರ್ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಹೂವು

Advertisement

ಎಲ್ಲಿ ಎಷ್ಟು ಹಾನಿ:? ಚಿಕ್ಕಮಗಳೂರು ತಾಲೂಕಿನಲ್ಲಿ 6 ಹೆಕ್ಟೇರ್‌, ಕೊಪ್ಪ 8.1 ಹೆಕ್ಟೇರ್‌, ಶೃಂಗೇರಿ 7.60 ಹೆಕ್ಟೇರ್‌, ನರಸಿಂಹರಾಜಪುರ 511 ಹೆಕ್ಟೇರ್‌, ತರೀಕೆರೆ 0.50 ಹೆಕ್ಟೇರ್‌ ಸೇರಿದಂತೆ ಒಟ್ಟು 533.11 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ತರೀಕೆರೆ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿವೆ. ಕೊಪ್ಪ ತಾಲೂಕಿನಲ್ಲಿ ಕನಿಷ್ಠ ಪ್ರಮಾಣದ ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 23 ಮನೆಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 22 ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 8, ಶೃಂಗೇರಿ 10, ನರಸಿಂಹರಾಜಪುರ 29, ಕಡೂರು 31, ತರೀಕೆರೆ 62 ಹಾಗೂ ಅಜ್ಜಂಪುರ ತಾಲೂಕಿನಲ್ಲಿ 37ಮನೆಗಳಿಗೆ ಹಾನಿಯಾಗಿದೆ.

ರಸ್ತೆ, ಸೇತುವೆಗಳಿಗೆ ಹೊಡೆತ: ಲೋಕೋಪಯೋಗಿ ಇಲಾಖೆಗೆ ಸಂಬಂ ಧಿಸಿದಂತೆ ಚಿಕ್ಕಮಗಳೂರು ತಾಲೂಕಿನಲ್ಲಿ 5.75 ಕೋಟಿ ರೂ., ಮೂಡಿಗೆರೆ 25.78 ಕೋಟಿ ರೂ., ಕೊಪ್ಪ 5.40 ಕೋಟಿ ರೂ., ಶೃಂಗೇರಿ 7.15 ಕೋಟಿ ರೂ., ನರಸಿಂಹರಾಜಪುರ 2.90 ಕೋಟಿ. ರೂ., ತರೀಕೆರೆ 3.45ಕೋಟಿ ರೂ., ಅಜ್ಜಂಪುರ 10 ಲಕ್ಷ ರೂ. ರಸ್ತೆಗಳು, ಸೇತುವೆ, ಮೋರಿಗಳಿಗೆ ಹಾನಿಯಾಗಿದೆ.

ಕೆರೆಕಟ್ಟೆಗಳಿಗೆ ಧಕ್ಕೆ: ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಗೆ ಸಂಬಂಧಿಸಿ ಚಿಕ್ಕಮಗಳೂರು ತಾಲೂಕಿನಲ್ಲಿ 1.7 ಕೋಟಿ ರೂ.,  ಮೂಡಿಗೆರೆ 1.57 ಕೋಟಿ ರೂ., ಕೊಪ್ಪ 17.81ಕೋಟಿ, ಶೃಂಗೇರಿ 15.36, ನರಸಿಂಹರಾಜಪುರ 41.21 ಕೋಟಿ, ತರೀಕೆರೆ 48 ಲಕ್ಷ ರೂ. ಸೇರಿದಂತೆ ಒಟ್ಟು 77.50 ಕೋಟಿ ರೂ.ನಷ್ಟು ಹಾನಿಯಾಗಿದ್ದರೆ, ಸಣ್ಣನೀರಾವರಿ ಇಲಾಖೆಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 3.5 ಕೋಟಿ, ಮೂಡಿಗೆರೆ 60 ಲಕ್ಷ, ಕೊಪ್ಪ 19ಲಕ್ಷ, ನರಸಿಂಹರಾಜಪುರ 84 ಲಕ್ಷ, ತರೀಕೆರೆ 4.70 ಕೋಟಿ ರೂ. ಕೆರೆಕಟ್ಟೆಗಳಿಗೆ ಧಕ್ಕೆಯಾಗಿದೆ.

ಮೆಸ್ಕಾಂಗೆ ನಷ್ಟ: ಭಾರೀ ಮಳೆಯಿಂದ ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ಒಟ್ಟು 54.48 ಲಕ್ಷ ರೂ. ನಷ್ಟವಾಗಿದೆ. ಚಿಕ್ಕಮಗಳೂರು ತಾಲೂಕು 14.19 ಲಕ್ಷ ರೂ., ಮೂಡಿಗೆರೆ 5.66, ಲಕ್ಷ, ಕೊಪ್ಪ 14.07 ಲಕ್ಷ, ಶೃಂಗೇರಿ 4.62 ಲಕ್ಷ,ನ.ರಾ.ಪುರ10.94 ಲಕ್ಷ ರೂ. ಕಡೂರು 2.65 ಲಕ್ಷ, ತರೀಕೆರೆ 1.88 ಲಕ್ಷ ಹಾಗೂ ಅಜ್ಜಂಪುರ 47 ಸಾವಿರ ರೂ.ನಷ್ಟವಾಗಿದ್ದರೆ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 65 ಲಕ್ಷ, ಮೂಡಿಗೆರೆ 14 ಲಕ್ಷ, ನರಸಿಂಹರಾಜಪುರ 10 ಲಕ್ಷ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next