Advertisement

ಒಂದೇ ರಾತ್ರಿ ಮಳೆಗೆ ನೊಂದಕಾಳೂರು; ಅರ್ಧ ಸಿಲಿಕಾನ್‌ ಸಿಟಿ ಜಲಾವೃತ

12:18 AM Sep 06, 2022 | Team Udayavani |

ಬೆಂಗಳೂರು: ರವಿವಾರ ರಾತ್ರಿ ಸುರಿದ ಮಳೆ ಅಬ್ಬರಕ್ಕೆ ರಾಜಧಾನಿಯ ಅರ್ಧ ಭಾಗ ಮುಳುಗಡೆಯಾಗಿದೆ. ಕೊಳೆಗೇರಿ ಯಿಂದ ಹಿಡಿದು ಗಗನ ಚುಂಬಿ ಅಪಾರ್ಟ್‌ ಮೆಂಟ್‌ಗಳ ನಿವಾಸಿಗಳವರೆಗೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Advertisement

ಹೊರಗೆ ದುಡಿಯಲು ಹೋದವರು ಮನೆಗೆ ವಾಪಸಾಗಲಾಗದೇ, ಮನೆಯಲ್ಲಿರುವವರು ಕಚೇರಿಗೆ ತೆರಳ ಲಾಗದೇ ಪರಿತಪಿಸುವಂತಾಗಿದೆ.

ಸುಮಾರು 60ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿವೆ. ರಾತ್ರಿಯಿಡೀ ಜಾಗರಣೆ ಮಾಡಿದ ಜನರಿಗೆ ಸೋಮವಾರ ಬೆಳಗ್ಗೆಯೂ ನೆರೆಯಿಂದ ಮುಕ್ತಿ ಸಿಗಲಿಲ್ಲ. ಬೆಳ್ಳಂದೂರು ಮುಖ್ಯರಸ್ತೆ, ಮಾರತಹಳ್ಳಿ ಯ ಇಕೋಸ್ಪೇಸ್‌ ಸೇರಿ ಇನ್ನಿತರ ಕಡೆ ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿ 2 ಕಿ.ಮೀ.ಗೂ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿತ್ತು.

ಮಹದೇವಪುರ, ಪೂರ್ವ ಬೊಮ್ಮನ ಹಳ್ಳಿ ವಲಯ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳು ಪರದಾಡುವಂತಾಗಿದೆ. ರೈನ್‌ಬೋ ಡ್ರೈವ್‌, ಅನುಗ್ರಹ ಲೇಔಟ್‌ಗಳು 3 ತಿಂಗಳಲ್ಲಿ 5ನೇ ಬಾರಿ ಜಲಾವೃತವಾಗಿವೆ. 273 ಮನೆಗಳಲ್ಲಿ ನೀರು ನಿಂತಿದೆ. ಜಲಾವೃತ ಬಡಾವಣೆಗಳಲ್ಲಿ ಜನರ ಓಡಾಟಕ್ಕೆ ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ನೀರನ್ನು ಹೊರಹಾಕಲು 45 ಪಂಪ್‌ಸೆಟ್‌ಗಳನ್ನು ನಿಯೋಜಿಸಲಾಗಿದೆ. ಬೆಳ್ಳಂದೂರಿನ ಮುನ್ನೆಕೊಳಾಲು ಕೊಳಗೇರಿ ಮುಳುಗಿ 20ಕ್ಕೂ ಹೆಚ್ಚಿನ ಶೆಡ್‌ಗಳ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ.

ವಿಧಾನಸೌಧಕ್ಕೂ ನೀರು
ಮಳೆಯ ಪರಿಣಾಮ ವಿಧಾನಸೌಧ ತಳಮಹಡಿ ಯಲ್ಲಿನ ಕ್ಯಾಂಟೀನ್‌ಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮಳೆ ನೀರಿನ ಪ್ರಮಾಣಹೆಚ್ಚಾದ ಕಾರಣ ಕ್ಯಾಂಟೀನ್‌ ಜಲಾವೃತವಾ ಗಿತ್ತು.

Advertisement

23 ವರ್ಷದ ದಾಖಲೆ
ಬೆಂಗಳೂರಿನಲ್ಲಿ ಸಾಮಾ ನ್ಯವಾಗಿ ಜೂನ್‌ 1ರಿಂದ ಸೆಪ್ಟಂ ಬರ್‌ ಮೊದಲ ವಾರದವರೆಗೆ ಸರಾಸರಿ 313 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ಬಾರಿ 709 ಮಿ.ಮೀ. ಮಳೆಯಾಗಿದೆ. 1999ರ ಬಳಿಕ ಈ ಬಾರಿ ಅತಿಹೆಚ್ಚು ಮಳೆ ಸುರಿದಿದೆ. 1999ರಲ್ಲಿ 725 ಮಿ.ಮೀ.ಮಳೆಯಾಗಿತ್ತು.

ಬೆಂಗಳೂರಿಗೆ ನೀರಿಲ್ಲ
ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಜಲಾನಯನದ ಯಂತ್ರಗಾರಗಳು ಮುಳುಗಿದ ಪರಿಣಾಮ ಸೆ.6ರಂದು ಬೆಂಗಳೂರಿನ ಬಹುತೇಕ ಭಾಗಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಅರ್ಧಕ್ಕೂ ಹೆಚ್ಚಿನ ಭಾಗಕ್ಕೆ ಸೋಮವಾರ ದಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು ಎಂದು ಜಲಮಂಡಳಿ ಅಧಿಕಾರಿ ಗಳು ತಿಳಿಸಿದ್ದಾರೆ.

ವೀಡಿಯೋಗಳು ವೈರಲ್‌
ಬೆಂಗಳೂರು ಮಳೆಯ ಅವಾಂತರದ ವೀಡಿಯೋಗಳು ಸೋಮವಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿವೆ. ಜನರು ತಮ್ಮ ತಮ್ಮ ಬಡಾವಣೆಗಳಲ್ಲಿನ ಫೋಟೋ, ವೀಡಿಯೋಗಳನ್ನು ಹಾಕಿ “ರಾಜಧಾನಿಯ ಪರಿಸ್ಥಿತಿ’ಯನ್ನು ಜಗತ್ತಿಗೇ ತೆರೆದಿಟ್ಟಿದ್ದಾರೆ. ಹಲವು ಕಂಪೆನಿಗಳು ವಿವಿಧ ಕಾರಣಗಳಿಗೆ ಬೆಂಗಳೂರಿನ ಬದಲು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿರುವ ಹೊತ್ತಲ್ಲೇ ಈ ಬೆಳವಣಿಗೆ ಸಿಲಿಕಾನ್‌ ಸಿಟಿಯ ವರ್ಚಸ್ಸಿಗೆ ಮತ್ತಷ್ಟು ಧಕ್ಕೆ ತರುವ ಸಾಧ್ಯತೆ ಇದೆ. ಮಳೆಯಿಂದಾಗಿ ಸೋಮವಾರ ಹೊರವರ್ತುಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತದೆ ಎಂಬುದನ್ನು ಅರಿತ ಈ ಭಾಗದ ಐಟಿ-ಬಿಟಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ಘೋಷಿಸಿದವು. ಮಳೆ ಪ್ರಮಾಣ ಇಳಿದು, ವಾಹನ ಸಂಚಾರ ಸುಗಮ ಆಗುವವರೆಗೂ ವರ್ಕ್‌ ಫ್ರಂ ಹೋಂ ಮುಂದುವರಿಸುವಂತೆ ಸೂಚಿಸಿವೆ.

ವಿಮಾನನಿಲ್ದಾಣಕ್ಕೂ ನುಗ್ಗಿದ ನೀರು
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿ ಪ್ರಯಾಣಿಕರು ಪರದಾಡಿ ದರು. ವಿಮಾನ ನಿಲ್ದಾಣದ ಟರ್ಮಿನಲ್‌, ವಿಐಪಿ ಲೇನ್‌, ಪಿಕಪ್‌ ಪಾಯಿಂಟ್‌ ಸಂಪೂರ್ಣ ಜಲಾವೃತ ವಾಗಿತ್ತು. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತವಾಗಿದ್ದು, ಟ್ರ್ಯಾಕ್ಟರ್‌ ಮೂಲಕ ಜನರನ್ನು ಸ್ಥಳಾಂತರಿಸಲಾಯಿತು.

ನಾಳೆ ರಾಜ್ಯಕ್ಕೆ ಕೇಂದ್ರ ತಂಡ
ರಾಜ್ಯದಲ್ಲಿ ಮಳೆಯಿಂದಾದ ಅನಾಹುತ ಪರಿಶೀಲಿಸಲು ಕೇಂದ್ರ ತಂಡ ಆಗಮಿಸಲಿದ್ದು, ಸೆ.7ರಿಂದ 9ರ ವರೆಗೆ ಪ್ರವಾಸ ಮಾಡಲಿದೆ. ಸೆ.7ರಂದು ಕೇಂದ್ರ ತಂಡವು ಮುಖ್ಯಮಂತ್ರಿಯವರ ಜತೆ ಚರ್ಚಿಸಿದ ಬಳಿಕ ಮಳೆ ಹಾನಿ ಸಂಭವಿಸಿದ ಜಿಲ್ಲೆಗಳಲ್ಲಿ 3 ದಿನ ಸಂಚರಿಸ ಲಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ, ಹಾವೇರಿ, ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪರಿಸ್ಥಿತಿಯ ಅಧ್ಯಯನ ಮಾಡಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಸೆ. 10ರ ವರೆಗೆ ಮಳೆ
ಸೆ.10ರ ವರೆಗೂ ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ 9 ರಂದು ಆರೆಂಜ್‌, ಉಳಿದ ಜಿಲ್ಲೆಗಳಿಗೆ 10 ರವರೆಗೆ ಎಲ್ಲೋ ಅಲರ್ಟ್‌ ನೀಡಿದೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನ
ಮಳೆಯಾಗಲಿದೆ.

200 ಮಿ.ಮೀ. ಮಳೆ
ಚಿಕ್ಕಮಗಳೂರಿನ ಸಾರಗೋಡಿನಲ್ಲಿ 1 ಗಂಟೆಯಲ್ಲಿ 200 ಮಿ.ಮೀ. ಮಳೆ ಸುರಿದು ದಾಖಲೆ ನಿರ್ಮಿಸಿದೆ.

600 ಕೋಟಿ ರೂ. : ಸಿಎಂ
ಐದು ದಿನಗಳಿಂದ ಸುರಿದ ಭಾರೀ ಮಳೆಗೆ ತತ್ತರಿಸಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 600 ಕೋ.ರೂ. ಬಿಡುಗಡೆ ಮಾಡು ವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ಜತೆಗಿನ ವೀಡಿಯೋ ಸಂವಾದ ಸಂದರ್ಭದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next