ಮಲೇಬೆನ್ನೂರು: ಹೋಬಳಿಯಲ್ಲಿ ಸೋಮವಾರ ಸಂಜೆ ಭಾರೀ ಗಾಳಿಮಳೆಯಿಂದಾಗಿ ತೆಂಗು, ಅಡಕೆ, ಬಾಳೆ ನೆಲಕಚ್ಚಿದ್ದು, ಭತ್ತದ ಬೆಳೆ ಚಾಪೆಹಾಸಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ.
ಸೋಮವಾರ ಸರಾಸರಿ 28.2 ಮಿ.ಮೀ. ಮಳೆಯಾಗಿದ್ದು ಕುಂಬಳೂರು, ಸಿರಿಗೆರೆ, ಕಮಲಾಪುರ, ಕುಣೆಬಳಕೆರೆ, ನಂದಿತಾವರೆ, ಬೂದಿಹಾಳು, ಜಿಗಳಿ, ಯಲವಟ್ಟಿ, ಹಳ್ಳಿàಹಾಳ್, ಧೂಳೆಹೊಳೆ, ವಾಸನ, ಉಕ್ಕಡಗಾತ್ರಿ, ಹಾಲಿವಾಣ, ಕೊಪ್ಪ, ಎಳೆಹೊಳೆ, ಕೊಕ್ಕನೂರು, ಕಂಬತ್ತನಹಳ್ಳಿ, ಹಿಂಡಸಘಟ್ಟ, ಗೋವಿನಹಾಳು, ಮೂಗಿನಗೊಂದಿ, ಜಿ.ಟಿ.ಕಟ್ಟೆ, ಬಗ್ಗನಾಳು ಮುಂತಾದ ಗ್ರಾಮಗಳಲ್ಲಿ ಸುಮಾರು 1100 ಎಕೆರೆಗೂ ಹೆಚ್ಚು ಭತ್ತದ ಬೆಳೆ ಚಾಪೆ ಹಾಸಿದ್ದು ರೈತರು ತಲೆಮೇಲೆ ಕೈಹೊತ್ತು ಕುಳಿತಿಕೊಳ್ಳುವ ಪರಿಸ್ಥಿತಿ ಬಂದಿದೆ.
ಎಳೆಹೊಳೆ, ಬೂದಿಹಾಳು, ಕಮಲಾಪುರ ಮತ್ತು ಮಲೇಬೆನ್ನೂರಿನಲ್ಲಿ ತಲಾ 1 ಕಚ್ಚಾ ಮನೆ ಹಾಗೂ ಸಿರಿಗೆರೆಯಲ್ಲಿ 19 ಕಚ್ಚಾ ಮನೆಗಳಿಗೆ ಹಾನಿಯಾಗಿವೆ. ಕುಂಬಳೂರು, ಹಳ್ಳಿàಹಾಳ್, ಹಿಂಡಸಘಟ್ಟ ಇನ್ನಿತರೆ ಗ್ರಾಮಗಳಲ್ಲೂ ತೆಂಗು, ಬಾಳೆ, ಅಡಕೆ ಮರಗಳು ಧರೆಗುರುಳಿವೆ, ಹೊಳೆಸಿರಿಗೆರೆಯಲ್ಲಿ ಪಶು ಆಸ್ಪತ್ರೆ ಮೇಲೆ ಮರ ಬಿದ್ದಿದ್ದು ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ.
ಶಾಸಕ ಎಸ್. ರಾಮಪ್ಪ ನಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ನಷ್ಟವಾಗಿರುವ ಜಮೀನುಗಳನ್ನು ಶೀಘ್ರವಾಗಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯಂದಿಗೆ ಜಂಟಿ ಸಮೀಕ್ಷೆ ಮಾಡಿ ಇನ್ನೆರಡ್ಮೂರು ದಿನಗಳೊಳಗೆ ಕಡತ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರನಗೌಡ, ಕೃಷಿ ಅಧಿಕಾರಿ ಇನಾಯತ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ, ಎಎಚ್‌ಒ ಸಂತೋಷ್, ತಹಶೀಲ್ದಾರ್ ಡಾ| ಎಂ.ಬಿ. ಆಶ್ವತ್ಥ, ಉಪತಹಶೀಲ್ದಾರ್ ಆರ್. ರವಿ, ರಾಜಸ್ವ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ದೇವರಾಜ್, ಶ್ರೀದರಮೂರ್ತಿ, ಶಿವಕುಮಾರ್, ಸುಭಾನಿ ಮತ್ತು ರೈತರು ಹಾಜರಿದ್ದರು.