Advertisement

Heavy Rain: ಒಂದು ಗಂಟೆಯಲ್ಲಿ ದಾಖಲೆಯ 637 ಮೀ.ಮೀ ಮಳೆ, ಕೊರಟಗೆರೆ ಪಟ್ಟಣ ಜಲಾವೃತ  

08:14 PM Aug 20, 2024 | Team Udayavani |

ಕೊರಟಗೆರೆ: ಸತತ 2 ಗಂಟೆ ಸುರಿದ ಮಳೆಗೆ ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಭಾಗದ ರಸ್ತೆಗಳೆಲ್ಲ ಜಲಾವೃತವಾಗಿ ಸುಮಾರು 60 ಮನೆ ಮತ್ತು 40ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿದೆ. ರಾತ್ರಿ ಸುರಿದ ಮಳೆಯಿಂದ ಬಿತ್ತನೆ ಮಾಡಿದ್ದ ಕೃಷಿ ಬೆಳೆಗಳೆಲ್ಲ ಮಳೆಯ ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾಂತರ ರೂಪಾಯಿ  ನಷ್ಟವಾಗಿದೆ.

Advertisement

ರಸ್ತೆಗಳೆಲ್ಲ ಜಲಾವೃತವಾದ್ದರಿಂದ ವಾಹನಗಳೆಲ್ಲ ನೀರಿನಲ್ಲಿ ತೇಲಿ ಕೆಟ್ಟು ಹೋಗಿವೆ. ಪಟ್ಟಣದ ಮುಖ್ಯರಸ್ತೆಯ ಸಂಚಾರ ಕಡಿತಗೊಂಡಿತು. ವಸತಿ ನಿಲಯಕ್ಕೆ ನೀರು ನುಗ್ಗಿ ದವಸ ಧಾನ್ಯ ಎಲ್ಲವೂ ನೀರು ಪಾಲಾಗಿದ್ದು, ಬುಡಮಾರನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೊಚ್ಚಿ ಹೋಗಿ ಸಂಪರ್ಕವೇ ಕಡಿತವಾಗಿದೆ.

40 ಅಂಗಡಿಗೆ ನುಗ್ಗಿದ ಮಳೆ ನೀರು

ರಾಜಕಾಲುವೆ ಮತ್ತು ಮುಖ್ಯಚರಂಡಿ ಒತ್ತುವರಿ ಆಗಿರುವ ಪರಿಣಾಮ ಕೊರಟಗೆರೆ ಪಟ್ಟಣದ ಕನಕದಾಸ ವೃತ್ತ ಹಾಗೂ ಶಿವಗಂಗಾ ಚಿತ್ರಮಂದಿರ ಸಮೀಪದ ಮುಖ್ಯರಸ್ತೆಯ 40ಕ್ಕೂ ಅಧಿಕ ಅಂಗಡಿಗಳಿಗೆ ಮಳೆನೀರು ನುಗ್ಗಿದೆ. ಮಳೆಯ ನೀರಿಗೆ ಹಣ್ಣಿನ ಅಂಗಡಿ, ಸಿಮೆಂಟ್ ಮತ್ತು ಬಟ್ಟೆ ಅಂಗಡಿಗಳಿಗೆ ನೀರು ಹರಿದು ಅವಾಂತರ ಸೃಷ್ಟಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿವೆ.

ಸ್ಥಳದಲ್ಲೇ ಮೊಕ್ಕಾಂ ಹೂಡಿದ ತಹಶೀಲ್ದಾರ್
ಮಳೆಯ ಆರ್ಭಟಕ್ಕೆ ಕೇವಲ 1 ಗಂಟೆಯಲ್ಲಿ ಕೊರಟಗೆರೆ ಜನತೆಯೇ ಬಿಚ್ಚಿಬಿದ್ದಿದ್ದು, ತಹಶೀಲ್ದಾರ್ ಮಂಜುನಾಥ.ಕೆ ಕೊರಟಗೆರೆ ಪಟ್ಟಣಕ್ಕೆ ದೌಡಾಯಿಸಿ ಅಗ್ನಿಶಾಮಕ, ಪಪಂ ಮತ್ತು ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ತಡರಾತ್ರಿ 3ಗಂಟೆವರೆಗೆ  ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಮಳೆಯಿಂದ ಅನಾಹುತ ಸಂಭವಿಸಿದರೆ ಗಮನಕ್ಕೆ ತರಲು ಮನವಿ ಮಾಡಿದ್ದಾರೆ.

1 ಗಂಟೆಯಲ್ಲಿ 637ಮೀ.ಮೀ ಮಳೆ..
ಕೊರಟಗೆರೆಯ ಮುಂಗಾರಿನ ವರ್ಷದ ವಾಡಿಕೆ ಮಳೆಯ ಪ್ರಮಾಣ 634ಮೀ.ಮೀ ಮಾತ್ರ. ಆದರೇ ಸೋಮವಾರ ರಾತ್ರಿ 8.30ರಿಂದ 9.45ರವರೇಗೆ 1 ಗಂಟೆ ಅವಧಿಯಲ್ಲಿ ಸುರಿದ ಮಘೆ ಮಳೆಯು 637ಮೀ.ಮೀ ಗೂ ಅಧಿಕ ಬಿದ್ದಿದೆ. ಕೊರಟಗೆರೆ ಪಟ್ಟಣ-140.2, ಹೊಳವನಹಳ್ಳಿ-154.2, ಕೋಳಾಲ-155.8, ಸಿ.ಎನ್.ದುರ್ಗ-54.2ಮೀ.ಮೀ ಮಳೆಯ ಪ್ರಯಾಣ ದಾಖಲಾಗಿ ಇತಿಹಾಸವೇ ಸೃಷ್ಟಿಸಿದೆ.

ಕೊರಟಗೆರೆಯ 25 ಕೆರೆಗಳು ಭರ್ತಿ
ಸಣ್ಣನೀರಾವರಿ ಮತ್ತು ಗ್ರಾಪಂಯ ತಿಮ್ಮನಹಳ್ಳಿ, ಬೈರೇನಹಳ್ಳಿ, ಎತ್ತಿಗಾನಹಳ್ಳಿ, ಚನ್ನಪಟ್ಟಣ, ನವಿಲುಕುರಿಕೆ, ಬೆಂಡೋಣಿ, ಮಲ್ಲೆಕಾವು, ನೇಗಲಾಲ, ಬಕ್ಕಾಪಟ್ಟಣ, ಜೆಟ್ಟಿಅಗ್ರಹಾರ, ಜಂಪೇನಹಳ್ಳಿ, ಗೋಕುಲದ ಕೆರೆ, ಗಂಗಾಧರೇಶ್ವರ, ಗೌಡನಕೆರೆ, ಗೋಬಲಗುಟ್ಟೆ, ಹೊಸಕೋಟೆ, ತುಂಬಾಡಿ ಕೆರೆಗಳು, ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳು ತುಂಬಿ ಹರಿಯುತ್ತಿದೆ. ಮಾವತ್ತೂರು ಮತ್ತು ತೀತಾ ಜಲಾಶಯ ತುಂಬುವ ಹಂತದಲ್ಲಿವೆ.

Advertisement

ಚನ್ನಸಾಗರ, ನಂಜಾಪುರಕ್ಕೆ ಡಿಸಿ ಭೇಟಿ, ಪರಿಶೀಲನೆ
ಜಿಲ್ಲಾಧಿಕಾರಿ ಶುಭಕಲ್ಯಾಣ್, ತುಮಕೂರು ಎಸ್ಪಿ ಅಶೋಕ್  ಜಯಮಂಗಲಿ ನದಿಪಾತ್ರದ ಚನ್ನಸಾಗರ ಮತ್ತು ನಂಜಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರಟಗೆರೆ ಭಾಗದಲ್ಲಿ ಮತ್ತೆ ಮಳೆಯಾದರೆ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಗಳು ಅಪಾಯದ ಮಟ್ಟಮೀರಿ ಹರಿಯಲಿವೆ. ನದಿಪಾತ್ರ ಮತ್ತು ಜಮೀನಿನಲ್ಲಿ ವಾಸಿಸುತ್ತಿರುವ ರೈತಾಪಿವರ್ಗ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಮನವಿ ಮಾಡಿದರು.

ಅಪಾಯದ ಎಚ್ಚರಿಕೆ ಬಗ್ಗೆ ಅರಿವು ಮೂಡಿಸಿ
“ಅಧಿಕಾರಿ ವರ್ಗ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ನದಿ ಪಾತ್ರದ ರೈತರಿಗೆ ಗ್ರಾಪಂ ಮತ್ತು ಕಂದಾಯ ಅಧಿಕಾರಿವರ್ಗ ಅಪಾಯದ ಎಚ್ಚರಿಕೆಯ ಬಗ್ಗೆ ಅರಿವು ಮೂಡಿಸುವ ಜೊತೆಗೆ ಮಳೆ ಆರಂಭವಾದ  ತಕ್ಷಣವೇ ಎಚ್ಚೆತ್ತುಕೊಂಡು ನದಿಪಾತ್ರಕ್ಕೆ ಧಾವಿಸಿ ಸಮಸ್ಯೆ ಅರಿಯಬೇಕಿದೆ. ಅಗತ್ಯವಿದ್ದರೆ ಗಂಜಿಕೇಂದ್ರ ತೆರೆಯಲು ತುರ್ತು ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ.” – ಶುಭಕಲ್ಯಾಣ್,  ಜಿಲ್ಲಾಧಿಕಾರಿ, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next