Advertisement

ಭಾರೀ ಮಳೆ; ಕೃತಕ ನೆರೆಗೆ ಸಿಲುಕಿಕೊಂಡವರ ರಕ್ಷಣೆ

11:48 PM Apr 08, 2019 | Team Udayavani |

ಪಾಂಡೇಶ್ವರ: ಇಲ್ಲಿನ ಮಾಲ್‌ ಒಂದರಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ಸೈರನ್‌ ಮೊಳಗಿತು. ಮಾಲ್‌ ಒಳಗಿದ್ದ ಜನ ಅಪಾಯದ ಮುನ್ಸೂಚನೆಯರಿತು ಓಡಿ ಬಂದರು. ಈ ವೇಳೆ ಭಾರೀ ಮಳೆಗೆ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿ ಹಲವರು ಸಿಲುಕಿಕೊಂಡಿದ್ದಾರೆಂಬ ಸುದ್ದಿ ಹರಡಿತು.

Advertisement

ಕ್ಷಣಾರ್ಧದಲ್ಲಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌ ಸಿಬಂದಿ, ಸ್ವಯಂ ಸೇವಕರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ರಕ್ಷಿಸಿದರು.

ಅಷ್ಟಕ್ಕೂ ಇದು ಅಣುಕು ಕಾರ್ಯಾ ಚರಣೆ. ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ತಂಡ, ಜಿಲ್ಲಾ ಆರೋಗ್ಯ ಇಲಾಖೆ, ಗೃಹರಕ್ಷಕದಳ, ಪೊಲೀಸ್‌ ಇಲಾಖೆ ವತಿಯಿಂದ ನಗರದ ಫೋರಂ ಪಿಝಾ ಮಾಲ್‌ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಗ್ನಿ ಅವಘಡ, ಕಟ್ಟಡ ಕುಸಿತ, ನೆರೆ ಸಂದರ್ಭ ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳು, ಯಾವ ರೀತಿ ಕಾರ್ಯಾಚರಣೆಗಳು ನಡೆಯುತ್ತವೆ ಎಂಬು ದನ್ನು ಜನಸಾಮಾನ್ಯರಿಗೆ ತಿಳಿಸಲಾಯಿತು. ಇಂತಹ ಅವಘಡಗಳುಂಟಾದಾಗಜನ ಯಾವ ರೀತಿ ಸುರಕ್ಷತೆ ಬಗ್ಗೆ ಗಮನ ಹರಿಸ ಬೇಕು ಎಂಬ ಬಗ್ಗೆಯೂ ತಿಳಿಸಲಾಯಿತು.

ಕಟ್ಟಡ ಕುಸಿತದ ವೇಳೆ…
ಇದೇ ವೇಳೆ ಕಟ್ಟಡ ಕುಸಿತದ ಸಂದರ್ಭ ರಕ್ಷಣಾ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನೂ ಅಣುಕು ಕಾರ್ಯಾಚರಣೆ ಮೂಲಕ ಪ್ರದರ್ಶಿಸಲಾಯಿತು. ಕುಸಿತ ಗೊಂಡ ಕಟ್ಟಡದ ಅವಶೇಷಗಳಡಿ ವ್ಯಕ್ತಿ ಸಿಲುಕಿ ಹಾಕಿಕೊಂಡರೆ ವಿಕ್ಟಿಮ್‌ ಲೊಕೇಶನ್‌ ಕೆಮರಾ ಬಳಸಿ ಆ ವ್ಯಕ್ತಿ ಯಾವ ಭಾಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಬಳಿಕ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿ ವ್ಯವ ಸ್ಥಿತವಾಗಿ ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿ ಸಲು ಕಾರ್ಯಾಚರಣೆ ನಡೆಯುತ್ತದೆ. ಅಲ್ಲದೆ, ಇಲ್ಲಿ ಶ್ವಾನಗಳನ್ನೂ ಬಳಸಿಕೊಂಡು ವ್ಯಕ್ತಿ ಯಾವ ಭಾಗದಲ್ಲಿದ್ದಾನೆಂದು ಪತ್ತೆ ಹಚ್ಚಬಹುದು ಎಂಬುದನ್ನು ಮಾದರಿ ಕಾರ್ಯಾಚರಣೆ ಮೂಲಕ ರಕ್ಷಣಾ ತಂಡ ದವರು ತೋರಿಸಿಕೊಟ್ಟರು. ಯಾವುದೇ ಅಪಾಯಗಳಾದಾಗ ಮಾಲ್‌ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನ ತತ್‌ಕ್ಷಣ ಹೊರಗೆ ಹೋಗಬೇಕು. ಆದರೆ ಬೇಗನೇ ಹೋಗಬೇಕೆಂಬ ಧಾವಂತದಲ್ಲಿ ಲಿಫ್ಟ್‌ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮೆಟ್ಟಿಲುಗಳನ್ನೇ ಇಂತಹ ಸಂದರ್ಭ ಬಳಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎನ್‌ಡಿಆರ್‌ಎಫ್ನ ಸುಬೀಷ್‌ ಕೆ.ಎಸ್‌., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌, ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ ಕುಮಾರ್‌, ಗೃಹರಕ್ಷಕದಳದ ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಣಕು ದೃಶ್ಯಗಳು
ನೆರೆ ನೀರಿನಲ್ಲಿ ಮುಳುಗುವ ವ್ಯಕ್ತಿಯನ್ನು ದೋಣಿಯ ಮೂಲಕ ಹೇಗೆ ರಕ್ಷಿಸ ಬಹುದು ಎಂಬುದನ್ನು ಎನ್‌ಡಿಆರ್‌ಎಫ್‌ ಸಿಬಂದಿ ತೋರಿಸಿಕೊಟ್ಟರು. ಇದಕ್ಕಾಗಿ ಮೂರು ರಕ್ಷಣಾ ಬೋಟ್‌ಗಳನ್ನು ತಂದು ಕಾರ್ಯಾಚರಣೆಯಲ್ಲಿ ಪ್ರದರ್ಶಿಸಲಾಯಿತು. ನೆರೆ ಸಂದರ್ಭ ಗಾಯಗೊಂಡವರನ್ನು ತುರ್ತು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌, ಬೈಕ್‌ ಆ್ಯಂಬುಲೆನ್ಸ್‌ಗಳನ್ನು ಬಳಸಿಕೊಂಡು ಆಸ್ಪತ್ರೆಗೆ ಸಾಗಿಸುವ ದೃಶ್ಯಗಳನ್ನು ಪ್ರದರ್ಶಿ ಸಲಾಯಿತು.

ಜಾಗೃತಿ ಕೆಲಸ
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಅಗ್ನಿಶಾಮಕದಳ ಅಧಿಕಾರಿ ಟಿ.ಎನ್‌. ಶಿವಶಂಕರ್‌, ಮಳೆಗಾಲಕ್ಕೂ ಮುನ್ನ ತುರ್ತು ಕಾರ್ಯಾಚರಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂಬುದು ಸರಕಾರದ ಆದೇಶ. ಈ ಹಿನ್ನೆಲೆಯಲ್ಲಿ ಫೋರಂ ಮಾಲ್‌ನಲ್ಲಿ ಅಣುಕು ಕಾರ್ಯಾಚರಣೆ ನಡೆಸಿ ಜನರನ್ನು ಜಾಗೃತಿಗೊಳಿಸುವ ಕೆಲಸ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next