Advertisement

ವಿಷದ ಮಳೆ…ಮಣ್ಣು ಪಾಲಾದ ತೊಗರಿ

05:38 PM Dec 02, 2021 | Team Udayavani |

ಕಲಬುರಗಿ: ಕಳೆದ ವರ್ಷ ಹಾಗೂ ಪ್ರಸಕ್ತವಾಗಿ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಬಿಸಿಲು ನಾಡು ಎಂಬುದಾಗಿ ಕರೆಯುವುದು ತಪ್ಪೆನಿಸುತ್ತಿದೆ. ಮಳೆ ಕೊರತೆಯಿಂದಲೇ ಬೆಳೆಗಳು ಹಾಳಾಗುತ್ತಿದ್ದರೆ ಈಗ ಉಲ್ಟಾ ಎನ್ನುವಂತೆ ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗುತ್ತಿವೆ. ಜೂನ್‌ ಮೊದಲ ವಾರದಿಂದ ಸೆಪ್ಟೆಂಬರ್‌ 30ರ ವರೆಗೆ ಮುಂಗಾರು ಹಾಗೂ ಹಿಂಗಾರು ಮಳೆಗಾಲವಿರುತ್ತದೆ. ಈ ಅವಧಿಯಲ್ಲಿ ಕೋಲಾರ ಬಿಟ್ಟರೆ ರಾಜ್ಯ ದಲ್ಲೇ ಅತ್ಯಧಿಕ ಮಳೆ ಕಲಬುರಗಿಯಲ್ಲಾಗಿದೆ.

Advertisement

ಜೂನ್‌ದಿಂದ ಸೆಪ್ಟೆಂಬರ್‌ ವರೆಗೆ 576 ಮಿ.ಮೀ ಸರಾಸರಿ ಮಳೆಯಾಗಬೇಕಿತ್ತು. ಆದರೆ 723 ಮಿ.ಮೀ (ಶೇ. 26 ಹೆಚ್ಚುವರಿ) ಮಳೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ 398 ಮಿ.ಮೀ ಸರಾಸರಿಗೆ 620 ಮಿ.ಮೀ (ಶೇ. 56 ಹೆಚ್ಚುವರಿ) ಮಳೆಯಾಗಿದೆ. ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯಲ್ಲಿ 443ಮಿ.ಮೀ ಮಳೆ ಪೈಕಿ 542ಮಿ.ಮೀ (ಶೇ. 22 ಹೆಚ್ಚುವರಿ) ಮಳೆಯಾಗಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 416 ಮಿ.ಮೀ ಮಳೆ ಪೈಕಿ 495 ಮಿ.ಮೀ ಮಳೆಯಾಗಿ ಹೆಚ್ಚುವರಿಯಾಗಿ ಶೇ. 19ರಷ್ಟು ಮಳೆಯಾಗಿದೆ.

ಕರಾವಳಿಯಲ್ಲಿ ಮೈನಸ್‌ ಮಳೆ: ಬಿಸಿಲು ನಾಡು ಕಲಬುರಗಿ ಜಿಲ್ಲೆಯಲ್ಲಿ ಶೇ. 26ರಷ್ಟು ಹೆಚ್ಚುವರಿ ಮಳೆಯಾಗಿದ್ದರೆ ಕರಾವಳಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 3388 ಮಿ.ಮೀ ಮಳೆ ಪೈಕಿ 2478 ಮಿ.ಮೀ ಮಳೆ ಮಾತ್ರವಾಗಿ ಶೇ. 27ರಷ್ಟು ಮೈನಸ್‌ ಮಳೆಯಾಗಿದೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ 418 ಮಿ.ಮೀ ಸರಾಸರಿ ಪೈಕಿ ಕೇವಲ 311 ಮಿ.ಮೀ ಮಳೆಯಾಗಿ ಮೈನಸ್‌ 25ರಷ್ಟು ಕೊರತೆಯಾಗಿದೆ. ಕೊಡಗು ಜಿಲ್ಲೆಯಲ್ಲೂ 2188 ಮಿ.ಮೀ ಮಳೆ ಪೈಕಿ ಕೇವಲ 1692 ಮಿ.ಮೀ ಮಾತ್ರ ಮಳೆಯಾಗಿ ಶೇ. 23ರಷ್ಟು ಕೊರತೆಯಾಗಿದೆ.

ಮುಂಗಾರು ಹಾಗೂ ಹಿಂಗಾರು ಮಳೆ ಮುಗಿದ ನಂತರ ಅಕಾಲಿಕ ಮಳೆಯು ಕಲಬುರಗಿಗಿಂತ ಇತರ ಜಿಲ್ಲೆಗಳಲ್ಲೇ ಅತ್ಯಧಿಕವಾಗಿದೆ. ಅಕಾಲಿಕ ಮಳೆ ಬಿಟ್ಟರೆ ವಾಸ್ತವ ಮಳೆಯೇ ಕೋಲಾರ ಜಿಲ್ಲೆ ಬಿಟ್ಟರೆ ಕಲಬುರಗಿಯಲ್ಲೇ ಅತ್ಯಧಿಕವಾಗಿದೆ. ಶೇ. 70ರಷ್ಟು ಬೆಳೆಹಾನಿ: ಸತತ ಮಳೆಯಿಂದ ವಾಣಿಜ್ಯ ಬೆಳೆ ಸಂಪೂರ್ಣ ಹಾಳಾಗಿದೆ. ಪ್ರತಿ ವರ್ಷ ಎಕರೆ ಭೂಮಿಯಲ್ಲಿ ಆರೇಳು ಕ್ವಿಂಟಲ್‌ ಇಳುವರಿ ಬರುತ್ತಿದ್ದರೆ ಈ ವರ್ಷ ಒಂದು ಕ್ವಿಂಟಲ್‌ ಸಹ ಬಾರದಂತಾಗಿದೆ. ಪ್ರತಿ ವರ್ಷ ಸರಾಸರಿ 40 ಲಕ್ಷ ಕ್ವಿಂಟಲ್‌ ಇಳುವರಿ ಬಂದರೆ, ಈ ವರ್ಷ 10 ಲಕ್ಷ ಕ್ವಿಂಟಲ್‌ ಸಹ ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅಂದರೆ ಬೀಜ ಹಾಗೂ ಗೊಬ್ಬರ ಮತ್ತು ಕೀಟನಾಶಕ್ಕಾಗಿ ಮಾಡಿದ ಖರ್ಚು ಸಹ ಬರುವುದಿಲ್ಲ.

ಅತಿವೃಷ್ಟಿಯಿಂದ ಒಟ್ಟಾರೆ ಶೇ. 33ರಷ್ಟು ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 172 ಕೋಟಿ ರೂ. ಪರಿಹಾರ ಕೋರಿ ಅಕ್ಟೋಬರ್‌ ಮೊದಲ ವಾರದಲ್ಲಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ನೀಡಿದೆ. ಆದರೆ ತದನಂತರ ಅಂದರೆ ಚಂಡ ಮಾರುತದಿಂದ ಅಕ್ಟೋಬರ್‌ನಲ್ಲಿ ಬಿದ್ದ ಮಳೆಯಿಂದ ಹಾಗೂ ನವೆಂಬರ್‌ದಲ್ಲಿ ಬಿದ್ದ ಅಕಾಲಿಕ ಮಳೆ ಹಾನಿಗೆ ಪರಿಹಾರ ಹೇಗೆ? ಎನ್ನುವಂತಾಗಿದೆ.

Advertisement

ವಿಷದ ಮಳೆ: ನವೆಂಬರ್‌ದಲ್ಲಿ ಸುರಿದ ಅಕಾಲಿಕ ಮಳೆ ಅಕ್ಷರಶಃ ವಿಷದ ಮಳೆ ಎನ್ನುವಂತಾಗಿದೆ. ಅಳಿದುಳಿದ ತೊಗರಿ ಈ ಮಳೆಗೆ ಸಂಪೂರ್ಣ ಹಾಳಾಗಿದೆ. ತುಂತುರು ಮಳೆ, ಮಂಜು ಕವಿದ ವಾತಾವರಣದಿಂದ ಹೂವೆಲ್ಲ ಉದುರಿದೆ. ಅಲ್ಲದೇ ಕಾಯಿ ಹಿಡಿದಿದ್ದ ತೊಗರಿ ನೆಟೆರೋಗಕ್ಕೆ ಒಳಗಾಗಿದೆ. ಒಟ್ಟಾರೆ ಬಿತ್ತನೆಯಲ್ಲಿ ಶೇ. 50ಕ್ಕಿಂತ ಹೆಚ್ಚಿನ ತೊಗರಿ ನೆಟೆರೋಗಕ್ಕೆ ಒಳಗಾಗಿದೆ. ಎರಡ್ಮೂರು ಸಲ ಕೀಟನಾಶ ಸಿಂಪಡಣೆ ನಂತರ ತೊಗರಿ ಬೆಳೆಗೆ ನಷ್ಟವಾಗಿದೆ. ಒಟ್ಟಾರೆ ಅಕಾಲಿಕ ಮಳೆ ವಿಷದ ಮಳೆಯಾಗಿ ಪರಿವರ್ತನೆಯಾಗಿದೆ ಎನ್ನುತ್ತಾರೆ ರೈತರು.

ತೊಗರಿ ಮಂಡಳಿಗೇಕೆ ನಿರ್ಲಕ್ಷ್ಯ?: ಲಂಗರ್‌
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ 300 ಕೋಟಿ ರೂ. ನೀಡುವ ಸರ್ಕಾರ ರೈತರ ಅಭ್ಯುದಯ ಹಾಗೂ ಹಿತ ಕಾಪಾಡುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ತೊಗರಿ ಅಭಿವೃದ್ಧಿ ಮಂಡಳಿಗೆ ನಯಾ ಪೈಸೆ ಅನುದಾನ ನೀಡದಿರುವುದು ತೊಗರಿ ರೈತರ ದೌರ್ಭಾಗ್ಯವಾಗಿದೆ ಎಂದು ಉದ್ಯಮಿ ಸಂತೋಷ ಲಂಗರ್‌ ತಿಳಿಸಿದ್ದಾರೆ.

ತೊಗರಿ ಮಂಡಳಿಗೆ 10 ಕೋಟಿ ರೂ. ಅನುದಾನ ನೀಡಿದರೆ ಮಂಡಳಿಯಿಂದಲೇ ದಾಲ್‌ಮಿಲ್‌ ಸ್ಥಾಪಿಸಿ ಬೇಳೆ ಉತ್ಪಾದಿಸಿ ಬಿಸಿಯೂಟಕ್ಕೆ ಬಳಸಬಹುದಾಗಿದೆ. ಹೀಗೆ ಮಾಡಿದಲ್ಲಿ ಸರ್ಕಾರಕ್ಕೆ ಉಳಿತಾಯದ ಜತೆಗೆ ರೈತರಿಗೂ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಜನಪ್ರತಿನಿಧಿಗಳು ಬರೀ ಭಾಷಣ ಬಿಗಿಯುತ್ತಾರೆ. ಮಂಡಳಿಗೆ ಅನುದಾನ ತರಲು ಹೋರಾಟ ಮಾಡುವುದಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.

ತೊಗರಿ ಅಭಿವೃದ್ಧಿ ಮಂಡಳಿ ದಕ್ಷಿಣ ಕರ್ನಾಟಕ ಕಡೆಯಿದ್ದರೆ ಆ ಭಾಗದ ಜನಪ್ರತಿನಿಧಿಗಳು ಕನಿಷ್ಟ 100 ಕೋಟಿ ರೂ. ಅನುದಾನವನ್ನಾದರೂ ತರುತ್ತಿದ್ದರು. ಇದಕ್ಕೆ ಕಾμ, ಅಡಿಕೆ ಮಂಡಳಿಯೇ ಸಾಕ್ಷಿ. ಇನ್ಮುಂದೆಯಾದರೂ ನಮ್ಮ ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ ಎಂದಿದ್ದಾರೆ.

ಬೆಂಬಲ ಬೆಲೆ ಘೋಷಿಸಿ-ಖರೀದಿಸಿ
ಈ ವರ್ಷವಂತೂ ಹಿಂದೆಂದು ಕಂಡರಿಯದ ರೀತಿಯಲ್ಲಿ ವಾಣಿಜ್ಯ ಬೆಳೆ ಸಂಪೂರ್ಣ ಹಾಳಾಗಿದೆ. ಹೀಗಾಗಿ ರೈತನಿಗೆ ದಿಕ್ಕೇ ತೋಚದಂತಾಗಿದೆ. ಅಳಿದುಳಿದ ತೊಗರಿ ರಾಶಿ ತಿಂಗಳಾಂತ್ಯದಲ್ಲಿ ಇಲ್ಲವೇ ಜನವರಿ ತಿಂಗಳಲ್ಲಿ ಶುರುವಾಗುತ್ತದೆ. ಹೀಗಾಗಿ ರೈತನ ನೆರವಿಗೆ ಬರುವುದು ಸರ್ಕಾರದ ತುರ್ತು ಕೆಲಸವಾಗಿದೆ. ಹೀಗಾಗಿ ಕ್ವಿಂಟಲ್‌ಗೆ ಕನಿಷ್ಟ 8 ಸಾವಿರ ರೂ. ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಖರೀದಿ ಮಾಡಿದಲ್ಲಿ ಮಾತ್ರ ರೈತರಿಗೆ ಉಪಯೋಗವಾಗಲು ಸಾಧ್ಯ. ಕಳೆದ ಹತ್ತು ವರ್ಷಗಳಲ್ಲಿ ಕಳೆದ ವರ್ಷ ಮಾತ್ರ ರಾಜ್ಯ ಸರ್ಕಾರ ಕೇಂದ್ರದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ನಯಾಪೈಸೆ ಪ್ರೋತ್ಸಾಹ ಧನ ನೀಡಲಿಲ್ಲ. ಹಿಂದಿನ ಸರ್ಕಾರಗಳಲ್ಲಿ ಕನಿಷ್ಟ 250ರೂ. ಬೆಂಬಲ ಬೆಲೆ ನೀಡಲಾಗಿದ್ದರೆ ಕಳೆದ ವರ್ಷ ಮಾತ್ರ ನಯಾಪೈಸೆ ಪ್ರೋತ್ಸಾಹ ಧನ ನೀಡದೇ ರೈತರನ್ನು ವಂಚಿಸಲಾಯಿತು.

ಪ್ರಸಕ್ತವಾಗಿ ತೊಗರಿಗೆ ಕೇಂದ್ರ ಸರ್ಕಾರ 6300ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕನಿಷ್ಟ 1500ರೂ ಪ್ರೋತ್ಸಾಹ ಧನ ನೀಡಿದಲ್ಲಿ 8000ರೂ. ಸಮೀಪವಾಗುತ್ತದೆ. ತೊಗರಿ ಬಿತ್ತನೆ ಸಮಯದಲ್ಲಿ ಕಳೆದ ಮಾರ್ಚ್‌, ಏಪ್ರಿಲ್‌ ಮೇ ತಿಂಗಳಲ್ಲೂ 7000ರೂ. ದರ ಇದ್ದ ತೊಗರಿ ಈಗ ಮಾರುಕಟ್ಟೆಯಲ್ಲಿ 6000ರೂ. ಮಾತ್ರವಿದೆ. ತುರ್ತಾಗಿ ರಾಜ್ಯ ಸರ್ಕಾರ ತೊಗರಿ ಮಾರುಕಟ್ಟೆ ಬರುವ ಮುಂಚೆಯೇ ಈಗಲೇ ಕೇಂದ್ರಕ್ಕೆ ಪತ್ರ ಬರೆದು ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ಪಡೆದು ತದನಂತರ ಕನಿಷ್ಟ 1500ರೂ ಪ್ರೋತ್ಸಾಹ ಧನ ನಿಗದಿ ಮಾಡಿದಲ್ಲಿ ಸಣ್ಣ-ಸಣ್ಣ ರೈತರಿಗೂ ಸಹಾಯ ಮಾಡಿದಂತಾಗುತ್ತದೆ. ತೊಗರಿ ಮಾರುಕಟ್ಟೆಗೆ ಬಂದ ನಂತರ ರೈತರು ಬೊಬ್ಬೆ ಹಾಕಿದ ಮೇಲೆ ತದನಂತರ ಎಚ್ಚೆತ್ತು ಬೆಂಬಲ ಬೆಲೆಯಲ್ಲಿ ಮೀನಾಮೇಷ ಎಣಿಸುತ್ತಾ ಖರೀದಿ ಕೇಂದ್ರಗಳನ್ನು ಆರಂಭಿಸಿರುವುದನ್ನು ನಾವು ಹಿಂದೆ ನೋಡಿದ್ದೇವೆ. ಈಗ ಪುನಾರಾವರ್ತನೆ ಆಗಬಾರದು ಎಂಬುದೇ ರೈತರ ಕಳಕಳಿ ಮನವಿಯಾಗಿದೆ.

ಬೆಳೆ ಹಾನಿಗೆ 68.67 ಕೋಟಿ ರೂ. ಬಿಡುಗಡೆ
ಕಳೆದ ಜುಲೈ-ಸೆಪ್ಟೆಂಬರ್‌ ತಿಂಗಳಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದೂವರೆಗೆ ಆರು ಕಂತುಗಳಲ್ಲಿ 79,673 ಫಲಾನುಭವಿಗಳಿಗೆ 68.67 ಕೋಟಿ ರೂ. ಇನಪುಟ್‌ ಸಬ್ಸಿಡಿಯನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಒಟ್ಟಾರೆ 172 ಕೋಟಿ ರೂ. ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಈಗ 68.67 ಕೋಟಿ ರೂ. ಬಿಡುಗಡೆಯಾಗಿದೆ.

ಜಿಲ್ಲೆಯ ಕಲಬುರಗಿ, ಕಾಳಗಿ, ಚಿಂಚೋಳಿ, ಚಿತ್ತಾಪುರ, ಆಳಂದ, ಅಫಜಲಪುರ ಜೇವರ್ಗಿ, ಶಹಾಬಾದ, ಸೇಡಂ, ಯಡ್ರಾಮಿ ತಾಲೂಕುಗಳಲ್ಲಿ ಬೆಳೆ ಹಾನಿಗೊಳಗಾಗಿದ್ದವು. ಕಂದಾಯ ಮತ್ತು ಕೃಷಿ ಇಲಾಖೆಯು ಜಂಟಿ ಸಮೀಕ್ಷೆ ನಡೆಸಿ ಸುಮಾರು 2,32,872 ಹೆಕ್ಟೇರ್‌ ಬೆಳೆ ಹಾನಿಯಾದ ಕಾರಣ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ 68.67 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ ತಿಳಿಸಿದ್ದಾರೆ.

ಬೆಳೆ ಪರಿಹಾರಕ್ಕಾಗಿ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದ್ದು, ಇದೀಗ ಏಳನೇ ಹಂತದಲ್ಲಿ 9,715 ಫಲಾನುಭವಿಗಳಿಗೆ 747.85 ಲಕ್ಷ ಇನ್‌ಪುಟ್‌ ಸಬ್ಸಿಡಿ ಜಮೆ ಮಾಡಲು ಅನುಮೋದನೆ ದೊರೆತಿದೆ. ಇದನ್ನು ಸಹ ಶೀಘ್ರದಲ್ಲಿಯೇ ರೈತರ ಬ್ಯಾಂಕ್‌ ಖಾತೆಗಳಿಗೆ 747.85 ಲಕ್ಷ ರೂ. ಪರಿಹಾರ ಧನ ಜಮೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next