Advertisement

Heavy Rain 104 ಪ್ರದೇಶಗಳಲ್ಲಿ ಅತಿ ನೆರೆ ಸಂಭವ; ಕೊಡಗಿನಲ್ಲಿ 10 ಕಾಳಜಿ ಕೇಂದ್ರ

12:33 AM Aug 07, 2024 | Team Udayavani |

ಮಡಿಕೇರಿ: ಕೊಡಗಿನಲ್ಲಿ ಮತ್ತೆ ಭಾರೀ ಮಳೆ ನೆರೆ ಭೀತಿಯೊಂದಿಗೆ ಗುಡ್ಡ ಕುಸಿತದಂತಹ ಪ್ರಕೃತಿ ವಿಕೋಪಗಳು ನಡೆಯುವ ಸಾಧ್ಯತೆ ಇದೆ ಎಂದಿರುವ ಭಾರತೀಯ ಭೌಗೋಳಿಕ ಸರ್ವೆ ಇಲಾಖೆ, 104 ಪ್ರದೇಶಗಳನ್ನು ಗುರುತಿಸಿದ್ದು, ಎಚ್ಚರಿಕೆ ವಹಿಸುವಂತೆ ತಿಳಿಸಿದೆ.

Advertisement

ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಈಗಾಗಲೇ 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 300 ಕುಟುಂಬಗಳನ್ನು ಅಪಾಯಕಾರಿ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.

ಕೊಡಗಿನಲ್ಲಿ 2018 ಮತ್ತು 2019ರಲ್ಲಿ ಭಾರೀ ಭೂಕುಸಿತ ಉಂಟಾಗಿ ಅಪಾರ ನಷ್ಟ ಉಂಟಾಗಿತ್ತು. ಇತ್ತೀಚೆಗೆ ಕೇರಳದ ವಯನಾಡಿನಲ್ಲಿಯೂ ಪ್ರಳಯ ಸದೃಶ ಭೂಕುಸಿತವಾಗಿದ್ದು, ಈ ಹಿನ್ನೆಲೆಯಲ್ಲಿ ಭೌಗೋಳಿಕ ಸರ್ವೆ ಇಲಾಖೆ ವಿವಿಧ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಅದರಂತೆ ಕೊಡಗಿನಲ್ಲಿ ಅತೀ ಹೆಚ್ಚು ಪ್ರದೇಶಗಳು ಅಪಾಯದ ಅಂಚಿನಲ್ಲಿವೆ ಎಂದು ಹೇಳಿದೆ.

ಮಡಿಕೇರಿ, ಕುಶಾಲನಗರದಲ್ಲಿ
ಹೆಚ್ಚು ಅಪಾಯ?
ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ತಾಲೂಕಿನಲ್ಲಿಯೇ ಹೆಚ್ಚು ಅಪಾಯಕಾರಿ ಪ್ರದೇಶಗಳಿರುವುದು ಸಹಜವಾಗಿಯೇ ಇಲ್ಲಿನ ಜನರನ್ನು ಅತಂಕಕ್ಕೀಡು ಮಾಡಿದೆ. ಮಡಿಕೇರಿ ಮತ್ತು ಕುಶಾಲನಗರ ತಾಲೂಕಿನಲ್ಲಿ 40 ಅಪಾಯಕಾರಿ ಪ್ರದೇಶಗಳಿದ್ದರೆ, ವಿರಾಜಪೇಟೆ, ಪೊನ್ನಂಪೇಟೆಯಲ್ಲಿ 13 ಮತ್ತು ಸೋಮವಾರಪೇಟೆ ತಾಲೂಕಿ ನಲ್ಲಿ 11 ಅಪಾಯದ ತಾಣಗಳನ್ನು ಗುರುತಿಸಲಾಗಿದೆ.

ಜುಲೈನಲ್ಲಿ ಶೇ. 50 ಹೆಚ್ಚು ಮಳೆ
ಕಾಫಿನಾಡಿನಲ್ಲಿ ಜುಲೈ ತಿಂಗಳಿನಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಶೇ. 50ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ವರದಿ ತಿಳಿಸಿದೆ. ಜುಲೈನಲ್ಲಿ ಕೊಡಗಿನಲ್ಲಿ 1,286 ಮಿ.ಮೀ. ಮಳೆಯಾಗಿದೆ.

Advertisement

ಆಗಸ್ಟ್‌ ತೀರಾ ಅಪಾಯಕಾರಿ!
ಈಗಾಗಲೇ ಜುಲೈಯಲ್ಲಿ ಭಾರೀ ಪ್ರಮಾಣದ ಮಳೆಯಾಗಿ ಅಪಾರ ಪ್ರಮಾಣದ ನಾಶ ನಷ್ಟವಾಗಿದೆ. ಜನರು ಮಳೆಯಿಂದಾಗಿ ಹೈರಾಣಾಗಿದ್ದಾರೆ. ಈ ನಡುವೆ ಮಳೆ ಕಡಿಮೆಯಾಗಬೇಕಿದ್ದ ಆಗಸ್ಟ್‌ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್‌ನಲ್ಲಿ ವಾಡಿಕೆ ಮಳೆಗಿಂತ ಶೇ. 24ರಷ್ಟು ಹೆಚ್ಚು ಮಳೆಯಾಗುವ ಸಂಭವ ಇದೆ. ಈ ರೀತಿಯಾದಲ್ಲಿ ಹೆಚ್ಚಿನ ಅಪಾಯ ಎದುರಾಗಲಿದೆ. ಆದುದರಿಂದ ಅದಕ್ಕೆ ತಕ್ಕುದಾಗಿ ವ್ಯವಸ್ಥೆಗಳನ್ನು ಮಾಡುವಂತೆ ಈಗಾಗಲೇ ಕೊಡಗಿಗೆ ಮಾಹಿತಿ ರವಾನಿಸಲಾಗಿದೆ.

ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳು ಮತ್ತು ಭೌಗೋಳಿಕ ಸರ್ವೇ ಇಲಾಖೆ ಗುರುತಿಸಿದ ಪ್ರದೇಶದ ಆಸುಪಾಸಿನ ಸುರಕ್ಷಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯುವ ಕುರಿತು ಗಮನ ನೀಡುವಂತೆ ಸೂಚಿಸಲಾಗಿದೆ. ಕೊಡಗು ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯತತ್ಪರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next